ಎಂ.ಎಸ್ಸಿ ಮೈಕ್ರೋಬಯಾಲಜಿಯಲ್ಲಿ ಪ್ರಥಮ ರ್ಯಾಂಕ್: ಬಳ್ಳೂರು ಗ್ರಾಮದ ರೂಪಾಗೆ ಬಂಗಾರದ ಪದಕ
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಇತ್ತೀಚೆಗೆ ನಡೆಸಿದ ಎಂ.ಎಸ್ಸಿ (ಮೈಕ್ರೋಬಯಾಲಜಿ) ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ತಾಲೂಕಿನ ಬಳ್ಳೂರು ಗ್ರಾಮದ ರೂಪಾ ಅವರು ಪ್ರಥಮ ರ್ಯಾಂಕ್ ಪಡೆದು ಬಂಗಾರದ ಪದಕಕ್ಕೆ ಭಾಜನರಾಗಿದ್ದಾರೆ.

ಕುಂದಾಪುರ: ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಇತ್ತೀಚೆಗೆ ನಡೆಸಿದ ಎಂ.ಎಸ್ಸಿ (ಮೈಕ್ರೋಬಯಾಲಜಿ) ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ತಾಲೂಕಿನ ಬಳ್ಳೂರು ಗ್ರಾಮದ ರೂಪಾ ಅವರು ಪ್ರಥಮ ರ್ಯಾಂಕ್ ಪಡೆದು ಬಂಗಾರದ ಪದಕಕ್ಕೆ ಭಾಜನರಾಗಿದ್ದಾರೆ.
ಬಸ್ರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಳ್ಕೂರು ನಿವಾಸಿಗಳಾದ ಗೋಪಾಲ ಪೂಜಾರಿ ಹಾಗೂ ಯಶೋಧ ಪೂಜಾರ್ತಿ ದಂಪತಿಯ ಪುತ್ರಿಯಾಗಿರುವ ರೂಪಾ ಅವರು ಹುಟ್ಟಿನಿಂದಲೇ ವಿಕಲಚೇತನರಾಗಿದ್ದರೂ, ವಿಜ್ಞಾನದಂತಹ ಕಠಿಣ ಹಾಗೂ ಪ್ರಾಯೋಗಿಕ ವಿಷಯವಾದ ಮೈಕ್ರೋಬಯಾಲಜಿಯಲ್ಲಿ ಅತ್ಯುನ್ನತ ಸಾಧನೆ ಮಾಡಿರುವುದು ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ.
ಗ್ರಾಮೀಣ ಭಾಗದಿಂದ ಬಂದಿರುವ ರೂಪಾ ಅವರ ಶೈಕ್ಷಣಿಕ ಸಾಧನೆಯ ಹಾದಿಯೂ ಗಮನಾರ್ಹವಾಗಿದೆ. ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಬಸ್ರೂರು ಸರ್ಕಾರಿ ಪ್ರೌಢಶಾಲೆಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಕುಂದಾಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ (ಬೋರ್ಡ್ ಹೈಸ್ಕೂಲ್) ಹಾಗೂ ಪದವಿಯನ್ನು ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ.
ನಂತರ ಸೂಕ್ಷ್ಮಜೀವ ವಿಜ್ಞಾನದಂತಹ ಕಠಿಣ ಹಾಗೂ ಪ್ರಯೋಗಾಧಾರಿತ ವಿಷಯವನ್ನು ಆಯ್ಕೆ ಮಾಡಿಕೊಂಡು ಸ್ನಾತಕೋತ್ತರ ಶಿಕ್ಷಣದಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಇದೀಗ ಕುವೆಂಪು ವಿಶ್ವವಿದ್ಯಾಲಯದ ಎಂ.ಎಸ್ಸಿ (ಮೈಕ್ರೋಬಯಾಲಜಿ) ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಗಳಿಸುವ ಮೂಲಕ ತಮ್ಮ ಪ್ರತಿಭೆ ಮತ್ತು ಪರಿಶ್ರಮವನ್ನು ಸಾಬೀತುಪಡಿಸಿದ್ದಾರೆ.
ರೂಪಾ ಅವರ ಈ ಸಾಧನೆ ವಿಕಲಚೇತನತೆ ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಪ್ರೇರಣಾದಾಯಕ ಉದಾಹರಣೆಯಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ಯುವಜನತೆಗೆ ಸ್ಪೂರ್ತಿಯಾಗಿದೆ. ಅವರ ಶೈಕ್ಷಣಿಕ ಸಾಧನೆಗೆ ಕುಟುಂಬಸ್ಥರು, ಶಿಕ್ಷಕರು, ಸ್ನೇಹಿತರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
