Skip to content
Billava News

ಬಿಲ್ಲವರ ಸೇವಾ ಸಂಘ ಬನ್ನಂಜೆಯ ನೂತನ ಅಧ್ಯಕ್ಷರಾಗಿ ಸದಾನಂದ ಪೂಜಾರಿ ಆಯ್ಕೆ

ಬಿಲ್ಲವರ ಸೇವಾ ಸಂಘ ಉಡುಪಿ (ರಿ.), ಬನ್ನಂಜೆಯ 2026ನೇ ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀ ಸದಾನಂದ ಪೂಜಾರಿ (ನಂದಗೋಲ್ಡ್) ಅವರು ಆಯ್ಕೆಯಾಗಿದ್ದಾರೆ.

By Billavavani
ಬಿಲ್ಲವರ ಸೇವಾ ಸಂಘ ಬನ್ನಂಜೆಯ ನೂತನ ಅಧ್ಯಕ್ಷರಾಗಿ ಸದಾನಂದ ಪೂಜಾರಿ ಆಯ್ಕೆ

ಉಡುಪಿ: ಸುದೀರ್ಘ 85 ವರ್ಷಗಳ ಇತಿಹಾಸ ಹೊಂದಿರುವ ಬಿಲ್ಲವರ ಸೇವಾ ಸಂಘ ಉಡುಪಿ (ರಿ.), ಬನ್ನಂಜೆಯ 2026ನೇ ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀ ಸದಾನಂದ ಪೂಜಾರಿ(ನಂದಗೋಲ್ಡ್) ಅವರು ಆಯ್ಕೆಯಾಗಿದ್ದಾರೆ.

ಬಿಲ್ಲವ ಸಮುದಾಯದ ಸ್ವಾಭಿಮಾನದ ಪ್ರತೀಕವಾಗಿ ಅಸ್ತಿತ್ವದಲ್ಲಿರುವ ಬನ್ನಂಜೆ ಬಿಲ್ಲವ ಸೇವಾ ಸಂಘವು ಹಲವು ದಶಕಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಸಂಘದಲ್ಲಿ ಹಲವಾರು ವರ್ಷಗಳಿಂದ ಪದಾಧಿಕಾರಿಯಾಗಿ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ಸದಾನಂದ ಪೂಜಾರಿ ಅವರು ಇದೀಗ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸಂಘದ ಪ್ರಮುಖ ಧ್ಯೇಯಗಳಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಪ್ರಮುಖವಾಗಿದೆ. ಸಂಘದ ಆರಂಭದಿಂದಲೂ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ವಿದ್ಯಾರ್ಥಿವೇತನ ನೀಡುವ ಮೂಲಕ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡಲಾಗುತ್ತಿದೆ. ಆರ್ಥಿಕವಾಗಿ ಅಶಕ್ತರಾಗಿದ್ದು, ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಲಕ್ಷಾಂತರ ರೂಪಾಯಿ ಮೌಲ್ಯದ ನೆರವು ಹಾಗೂ ಪ್ರೋತ್ಸಾಹ ನೀಡಲಾಗುತ್ತಿದೆ.

ಬನ್ನಂಜೆ ಬಿಲ್ಲವ ಸೇವಾ ಸಂಘದಿಂದ ಸಹಕಾರ ಪಡೆದ ಅನೇಕ ವಿದ್ಯಾರ್ಥಿಗಳು ಗುರುಗಳ ಆಶೀರ್ವಾದದಿಂದ ಉನ್ನತ ವ್ಯಾಸಂಗ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಉದಾಹರಣೆಗಳಿವೆ. ಪ್ರತಿವರ್ಷವೂ ವಿದ್ಯಾರ್ಥಿ ಪ್ರೋತ್ಸಾಹ ಸೇರಿದಂತೆ ಹಲವು ಮಾದರಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಘವು ತನ್ನದೇ ಆದ ಗುರುತನ್ನು ಮೂಡಿಸಿದೆ.

ಸದಾನಂದ ಪೂಜಾರಿ ಅವರು ಬನ್ನಂಜೆ ಕಲ್ಕುಡ ರಸ್ತೆಯ ನಾಗಬನ ಸಮಿತಿಯ ಅಧ್ಯಕ್ಷರಾಗಿ, ಮೂಡನಿಡಂಬೂರು ಗರಡಿ ಸಮಿತಿ ಸದಸ್ಯರಾಗಿ ಹಾಗೂ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ, ಉಡುಪಿ ಜುವೆಲ್ಲರ್ಸ್ ಅಸೋಸಿಯೇಷನ್‌ನ ಕೋಶಾಧಿಕಾರಿಯಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಉದ್ಯಮ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿರುವ ಸದಾನಂದ ಪೂಜಾರಿ ಅವರು 2005ರಲ್ಲಿ ‘ನಂದಗೋಲ್ಡ್ ಅಂಡ್ ಸಿಲ್ವರ್ ರಿಫೈನಿಂಗ್’ ಸಂಸ್ಥೆಯನ್ನು ಸ್ಥಾಪಿಸಿದರು. 2006ರಲ್ಲಿ ‘ನಂದಗೋಲ್ಡ್’ ಹೆಸರಿನಲ್ಲಿ ಚಿನ್ನ ಮತ್ತು ಬೆಳ್ಳಿ ವ್ಯವಹಾರ ಸಂಸ್ಥೆಯನ್ನು ಆರಂಭಿಸಿದರು. 2019ರಲ್ಲಿ ಚಿನ್ನ, ಬೆಳ್ಳಿ ಹಾಗೂ ವಜ್ರಗಳ ಸಂಸ್ಥೆಯನ್ನು ಪ್ರಾರಂಭಿಸಿದ ಅವರು, 2023ರಲ್ಲಿ ಪಡುಬಿದ್ರಿಯಲ್ಲಿ ತಮ್ಮ ಉದ್ಯಮದ ಸಹಸಂಸ್ಥೆಯಾಗಿ ‘ನ್ಯೂ ನಂದಗೋಲ್ಡ್’ ಸಂಸ್ಥೆಯನ್ನು ಆರಂಭಿಸಿದರು.

ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸದಾನಂದ ಪೂಜಾರಿ ಅವರ ನೇತೃತ್ವದಲ್ಲಿ ಬಿಲ್ಲವರ ಸೇವಾ ಸಂಘವು ಮತ್ತಷ್ಟು ಸಮಾಜಮುಖಿ ಹಾಗೂ ವಿದ್ಯಾರ್ಥಿ ಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುಂದುವರಿಸಲಿ ಎಂದು ಹಾರೈಸಲಾಗಿದೆ. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸದಾನಂದ ಪೂಜಾರಿ ಅವರಿಗೆ ಸಮಾಜದ ಗಣ್ಯರು ಹಾಗೂ ಸಂಘದ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.