Skip to content
Billava News

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಶೈಲಜಾ ರಾಜೇಶ್ ನಾಮಪತ್ರ ಸಲ್ಲಿಕೆ

ಜಾತಿ, ಧರ್ಮ, ವರ್ಗ ಭೇದವಿಲ್ಲದೆ ಎಲ್ಲರನ್ನು ಸಮಾನವಾಗಿ ಕಾಣುವ ಅವರ ವ್ಯಕ್ತಿತ್ವವು ಜನರಲ್ಲಿ ವಿಶೇಷ ಗೌರವವನ್ನು ಮೂಡಿಸಿದೆ.

By Billavavani
ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಶೈಲಜಾ ರಾಜೇಶ್ ನಾಮಪತ್ರ ಸಲ್ಲಿಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಹಾಗೂ ಸಮಾಜಸೇವಕಿ ಶ್ರೀಮತಿ ಶೈಲಜಾ ರಾಜೇಶ್ ಅವರು ನಾಮಪತ್ರ ಸಲ್ಲಿಸಿದ್ದಾರೆ.

ಸುಮಾರು 17 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಶೈಲಜಾ ರಾಜೇಶ್ ಅವರು ಪ್ರಸ್ತುತ ಜವಾಹರ್ ಬಾಲ್ ಮಂಚ್‌ನ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ಕಾರ್ಯಕ್ರಮಗಳ ಮೂಲಕ ಪಕ್ಷ ಸಂಘಟನೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ನೇತೃತ್ವದಲ್ಲಿ ಹಲವಾರು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಂಘಟನಾ ಚಟುವಟಿಕೆಗಳು ಯಶಸ್ವಿಯಾಗಿ ನಡೆದಿವೆ.

ಸಮಾಜಸೇವೆಯ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವ ಶೈಲಜಾ ರಾಜೇಶ್ ಅವರು ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ.)ಯ ಸ್ಥಾಪಕಿಯಾಗಿ ಬಡವರು, ಮಹಿಳೆಯರು, ಅಂಗವಿಕಲರು ಸೇರಿದಂತೆ ಅಗತ್ಯವಿರುವ ಅನೇಕ ಮಂದಿಗೆ ನೆರವು ನೀಡುವ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಜಾತಿ, ಧರ್ಮ, ವರ್ಗ ಭೇದವಿಲ್ಲದೆ ಎಲ್ಲರನ್ನು ಸಮಾನವಾಗಿ ಕಾಣುವ ಅವರ ವ್ಯಕ್ತಿತ್ವವು ಜನರಲ್ಲಿ ವಿಶೇಷ ಗೌರವವನ್ನು ಮೂಡಿಸಿದೆ.

ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿರುವ ಅವರು, ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ ಜನನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಮಹಿಳೆಯರು, ದೀನದಲಿತರು ಹಾಗೂ ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಅವರ ಕಾರ್ಯವೈಖರಿ ಪಕ್ಷದ ಕಾರ್ಯಕರ್ತರ ಮೆಚ್ಚುಗೆಗೆ ಪಾತ್ರವಾಗಿದೆ.

ಅವರ ಸಮಾಜಮುಖಿ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು ಪ್ರತಿಷ್ಠಿತ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇದಲ್ಲದೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳು ಅವರಿಗೆ ಲಭಿಸಿವೆ.

ಹಲವಾರು ಸಂಘ-ಸಂಸ್ಥೆಗಳಲ್ಲಿ ನಾಯಕತ್ವ ವಹಿಸಿರುವ ಅನುಭವ ಹೊಂದಿರುವ ಶೈಲಜಾ ರಾಜೇಶ್ ಅವರು ಸಂಘಟನಾ ಚಾತುರ್ಯ, ಪಕ್ಷ ನಿಷ್ಠೆ ಮತ್ತು ಜನಪರ ಚಿಂತನೆಗಳಿಂದ ಗುರುತಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅವರು ಸಮರ್ಥ ಅಭ್ಯರ್ಥಿಯಾಗಿದ್ದು, ಪಕ್ಷದ ಹೈಕಮಾಂಡ್ ಅವರುಗಳಿಗೆ ಅವಕಾಶ ನೀಡಬೇಕೆಂದು ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.