ಶಿವಗಿರಿ ಸೊಸೈಟಿಯ 27ನೇ ವಾರ್ಷಿಕ ಮಹಾಸಭೆ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ – ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಸನ್ಮಾನ
ಬೆಳಗಾವಿ: ಶಿವಗಿರಿ ಸೊಸೈಟಿಯ 27ನೇ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 20, 2026ರಂದು ಶಹಾಪುರದ ಎಸ್.ಪಿ.ಎಂ. ರಸ್ತೆಯ ಶಿವಮ್ ಫಂಕ್ಷನ್ ಹಾಲ್‌ನಲ್ಲಿ ನಡೆಯಿತು.

ಬೆಳಗಾವಿ: ಶಿವಗಿರಿ ಸೊಸೈಟಿಯ 27ನೇ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 20, 2026ರಂದು ಶಹಾಪುರದ ಎಸ್.ಪಿ.ಎಂ. ರಸ್ತೆಯ ಶಿವಮ್ ಫಂಕ್ಷನ್ ಹಾಲ್‌ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷರಾದ ಸುಜನ ಕುಮಾರ್ ಎಂ. ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಸಂಘದ ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರ ಸೇವೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸಮಾಜ ಸೇವಕರಾದ ಶ್ರೀ ಸತೀಶ್ ಎಂ. ನಾಯ್ಕ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ಸತೀಶ್ ಎಂ. ನಾಯ್ಕ ಅವರು ಶಿವಗಿರಿ ಸೊಸೈಟಿಯ ಕಾರ್ಯವೈಖರಿಯನ್ನು ಶ್ಲಾಘಿಸಿ, ಸಂಸ್ಥೆಯು ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಸುನಿಲ್ ಪೂಜಾರಿ ಮಾತನಾಡಿದರು. ನಿರ್ದೇಶಕ ಮಂಡಳಿಯ ಸದಸ್ಯರು, ಸಲಹಾ ಸಮಿತಿ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಈ ಹಿಂದೆ ಸಂಸ್ಥೆಯಲ್ಲಿ ಪಿಗ್ಮಿ ಸಂಗ್ರಹಕಾರರಾಗಿ ಕಾರ್ಯನಿರ್ವಹಿಸಿ ನಿಧನರಾದ ವೇದಮೂರ್ತಿ ಪೂಜಾರಿ ಅವರ ಕುಟುಂಬಕ್ಕೆ ಸಂಸ್ಥೆಯ ವತಿಯಿಂದ ಸಹಾಯಧನ ನೀಡಲಾಯಿತು.

ಅಧ್ಯಕ್ಷೀಯ ಭಾಷಣ ಮಾಡಿದ ಅಧ್ಯಕ್ಷರಾದ ಸುಜನ್ ಕುಮಾರ್ ಅವರು, ಸಂಸ್ಥೆಯು ಇಂದು ಈ ಮಟ್ಟಕ್ಕೆ ಬೆಳೆಯಲು ಸದಸ್ಯರು, ಸಿಬ್ಬಂದಿ ಹಾಗೂ ಹಿತೈಷಿಗಳ ಸಹಕಾರವೇ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು. ಸಂಸ್ಥೆಯಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಸದಸ್ಯರು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಪಿಗ್ಮಿ ಸಂಗ್ರಹಕಾರರು ಭಾಗವಹಿಸಿದ್ದರು. ವ್ಯವಸ್ಥಾಪಕರಾದ ಚಂದ್ರ ಎಚ್. ಪೂಜಾರಿ ಕಾರ್ಯಕ್ರಮವನ್ನು ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.
