ಮಂಗಳೂರು: ದಸರಾ ರಜೆಯಲ್ಲಿ ಮಳೆ ರಜೆ ಹೊಂದಾಣಿಕೆಗೆ ವಿಶೇಷ ತರಗತಿಗಳಿಗೆ ಅನುಮತಿ, ಪೋಷಕರ ಲಿಖಿತ ಒಪ್ಪಿಗೆ ಕಡ್ಡಾಯ
ಮಳೆಯಿಂದಾಗಿ ಶಾಲೆಗಳಿಗೆ ನೀಡಲಾಗಿದ್ದ ರಜೆಯನ್ನು ಹೊಂದಾಣಿಕೆ ಮಾಡುವ ಉದ್ದೇಶದಿಂದ, ಮುಂಬರುವ ದಸರಾ ರಜೆಯ ಅವಧಿಯಲ್ಲಿ ವಿಶೇಷ ತರಗತಿಗಳನ್ನು ನಡೆಸಲು ಶಾಲಾ ಶಿಕ್ಷಣ ಇಲಾಖೆ ಅನುಮತಿ ನೀಡಿದೆ.

ಮಂಗಳೂರು: ಮಳೆಯಿಂದಾಗಿ ಶಾಲೆಗಳಿಗೆ ನೀಡಲಾಗಿದ್ದ ರಜೆಯನ್ನು ಹೊಂದಾಣಿಕೆ ಮಾಡುವ ಉದ್ದೇಶದಿಂದ, ಮುಂಬರುವ ದಸರಾ ರಜೆಯ ಅವಧಿಯಲ್ಲಿ ವಿಶೇಷ ತರಗತಿಗಳನ್ನು ನಡೆಸಲು ಶಾಲಾ ಶಿಕ್ಷಣ ಇಲಾಖೆ ಅನುಮತಿ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಾಲೆಗಳ ಮುಖ್ಯಸ್ಥರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಲ್ಲಿಸಿದ ಮನವಿಯನ್ನು ಪರಿಶೀಲಿಸಿದ ಜಿಲ್ಲಾ ಡಿಡಿಪಿಐ ಅವರು, ಅಕ್ಟೋಬರ್ 3ರಿಂದ 7ರವರೆಗೆ ಮಳೆ ರಜೆ ಹೊಂದಾಣಿಕೆಗಾಗಿ ತರಗತಿಗಳನ್ನು ನಡೆಸಲು ಸಮ್ಮತಿ ನೀಡಿದ್ದಾರೆ.
ಆದರೆ, ಅಕ್ಟೋಬರ್ 3ರಿಂದಲೇ ದಸರಾ ರಜೆ ಘೋಷಿಸುವ ಶಿಕ್ಷಣ ಸಂಸ್ಥೆಗಳು ಮಳೆ ರಜೆಯ ಹೊಂದಾಣಿಕೆಯನ್ನು ಶನಿವಾರ ಮಧ್ಯಾಹ್ನದ ಬಳಿಕ ಹೆಚ್ಚುವರಿ ತರಗತಿಗಳನ್ನು ನಡೆಸುವ ಮೂಲಕ ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ.
ಪೋಷಕರ ಲಿಖಿತ ಒಪ್ಪಿಗೆ ಕಡ್ಡಾಯ
ಅಕ್ಟೋಬರ್ 3ರಿಂದ ವಿಶೇಷ ತರಗತಿಗಳನ್ನು ನಡೆಸುವ ಶಾಲೆಗಳು ಕೆಲವು ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಿದ್ಯಾರ್ಥಿಗಳನ್ನು ತರಗತಿಗಳಿಗೆ ಕಳುಹಿಸಲು ಪೋಷಕರಿಂದ ಲಿಖಿತ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ಪಡೆದು ಶಾಲೆಯಲ್ಲಿ ಕಾಯ್ದಿರಿಸಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.
ಅಲ್ಲದೆ, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಸಭೆ ನಡೆಸಿ, ವಿಶೇಷ ತರಗತಿಗಳನ್ನು ನಡೆಸುವ ಕುರಿತು ಮುಖ್ಯಶಿಕ್ಷಕರು ಹಾಗೂ ಸಹಶಿಕ್ಷಕರು ಸಭೆಯ ನಡವಳಿಯಲ್ಲಿ ದಾಖಲಿಸಬೇಕು.
ವಿಶೇಷ ತರಗತಿಗಳನ್ನು ನಡೆಸಲು ಕೈಗೊಂಡ ಕ್ರಮಗಳು ಹಾಗೂ ತರಗತಿಗಳ ವಿವರಗಳನ್ನು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಸಲ್ಲಿಸುವಂತೆ ಶಾಲೆಗಳಿಗೆ ಸೂಚನೆ ನೀಡಲಾಗಿದೆ.
ಮಳೆ ರಜೆಯಿಂದ ಉಂಟಾದ ಬೋಧನಾ ದಿನಗಳ ಕೊರತೆಯನ್ನು ಸರಿದೂಗಿಸುವ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದ್ದು, ಇಲಾಖೆಯ ನಿಗದಿತ ನಿಯಮಗಳು ಹಾಗೂ ಮಾರ್ಗಸೂಚಿಗಳನ್ನು ಪಾಲಿಸುವಂತೆ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಲಾಗಿದೆ.
