Skip to content
Billava News

ನಾರಾಯಣ ಗುರುಗಳ ತತ್ವಾದರ್ಶದಡಿ ಸಂಘಟಿತ ಸಮಾಜ ನಿರ್ಮಾಣಕ್ಕೆ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಸಜ್ಜು

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಕುಲಗುರುಗಳಾಗಿ ಸ್ವೀಕರಿಸಿಕೊಂಡು, ಅವರ ತತ್ವ–ಆದರ್ಶಗಳ ಅಡಿಯಲ್ಲಿ ಬದುಕುತ್ತಿರುವ ಬಿಲ್ಲವ, ತೀಯ, ಈಡಿಗ, ನಾಮಧಾರಿ, ದೀವರು ಸೇರಿದಂತೆ 26 ಪಂಗಡಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ,...

By Billavavani
ನಾರಾಯಣ ಗುರುಗಳ ತತ್ವಾದರ್ಶದಡಿ ಸಂಘಟಿತ ಸಮಾಜ ನಿರ್ಮಾಣಕ್ಕೆ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಸಜ್ಜು

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಕುಲಗುರುಗಳಾಗಿ ಸ್ವೀಕರಿಸಿಕೊಂಡು, ಅವರ ತತ್ವ–ಆದರ್ಶಗಳ ಅಡಿಯಲ್ಲಿ ಬದುಕುತ್ತಿರುವ ಬಿಲ್ಲವ, ತೀಯ, ಈಡಿಗ, ನಾಮಧಾರಿ, ದೀವರು ಸೇರಿದಂತೆ 26 ಪಂಗಡಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಸಮಾಜದ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಭ್ಯುದಯಕ್ಕಾಗಿ ಕಾರ್ಯನಿರ್ವಹಿಸುವ ಉದ್ದೇಶದಿಂದ ರೂಪುಗೊಂಡಿರುವ ಶ್ರೀ ನಾರಾಯಣ ಗುರು ವಿಚಾರ ವೇದಿಕೆ (ರಿ), ದಕ್ಷಿಣ ಕನ್ನಡ ಜಿಲ್ಲೆ ಇದೀಗ ಅಧಿಕೃತವಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸುತ್ತಿದೆ.

ಸಮಾಜಕ್ಕೆ ಅನ್ಯಾಯವಾದಾಗ ಹಾಗೂ ಅಪಮಾನವಾದ ಸಂದರ್ಭದಲ್ಲಿ ಸಂಘಟಿತವಾಗಿ ಪ್ರತಿಭಟಿಸುವುದು, ಸರ್ಕಾರದಿಂದ ಸಮಾಜಕ್ಕೆ ನ್ಯಾಯಯುತವಾಗಿ ದೊರೆಯಬೇಕಾದ ಸವಲತ್ತು ಮತ್ತು ಸೌಲಭ್ಯಗಳನ್ನು ಪಡೆಯಲು ಹೋರಾಟ ನಡೆಸುವುದು ಹಾಗೂ ಸಮಾಜವನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಶಕ್ತಗೊಳಿಸುವ ಉದ್ದೇಶದಿಂದ ಆರು ವರ್ಷಗಳ ಹಿಂದೆ ಸಮಾಜದ ಹಿರಿಯರು ಮತ್ತು ನಾಯಕರ ಚಿಂತನೆಯ ಫಲವಾಗಿ ಈ ಸಂಘಟನೆಯ ಪರಿಕಲ್ಪನೆ ರೂಪುಗೊಂಡಿತ್ತು.

WhatsApp Image 2026-10-07 at 4.32.41 AM.jpeg

ಈ ಹಿಂದೆ ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ಚಿಂತನೆಯ ಅಡಿಯಲ್ಲಿಯೇ ಸಮಾಜದ ಪ್ರಮುಖರನ್ನು ಒಗ್ಗೂಡಿಸಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರದ ಹೋರಾಟ, ಪಠ್ಯಪುಸ್ತಕದಲ್ಲಿ ನಾರಾಯಣ ಗುರುಗಳ ಪಠ್ಯ ಸೇರ್ಪಡೆಗಾಗಿ ಹೋರಾಟ, ಅಭಿವೃದ್ಧಿ ನಿಗಮ ಸ್ಥಾಪನೆಗಾಗಿ ಹೋರಾಟ ಹಾಗೂ ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ–ಚೆನ್ನಯರ ಹೆಸರಿಡುವಂತೆ ಆಗ್ರಹಿಸಿ ನಡೆದ ಹೋರಾಟ ಸೇರಿದಂತೆ ಹಲವು ಯಶಸ್ವಿ ಹೋರಾಟಗಳನ್ನು ಸಂಘಟಿಸಲಾಗಿತ್ತು. ಆದರೆ ಈವರೆಗೆ ಸಂಘಟನೆಯು ಅಧಿಕೃತ ಸ್ವರೂಪದಲ್ಲಿ ಕಾರ್ಯನಿರ್ವಹಿಸಿರಲಿಲ್ಲ.

ಇತ್ತೀಚೆಗೆ ಸಮಾಜದ ಪ್ರಮುಖರು ಹಾಗೂ ಹಿತೈಷಿಗಳು ಅಧಿಕೃತ ಸಂಘಟನೆಯ ಅಗತ್ಯತೆಯ ಕುರಿತು ಚರ್ಚೆ ನಡೆಸಿದ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಂಘಟನೆಯನ್ನು ಆರಂಭಿಸಲು ನಿರ್ಧರಿಸಲಾಯಿತು. ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ನಡೆದ ಸರಣಿ ಸಭೆಗಳ ಮೂಲಕ ಮೊದಲು ಜಿಲ್ಲಾ ಸಮಿತಿಯನ್ನು ರಚಿಸಲಾಗಿದ್ದು, ಬಳಿಕ ಮಂಗಳೂರು ದಕ್ಷಿಣ, ಉಳ್ಳಾಲ, ಬೆಳ್ತಂಗಡಿ, ಮೂಡುಬಿದಿರೆ ಹಾಗೂ ಬಂಟ್ವಾಳ ತಾಲೂಕು ಸಮಿತಿಗಳನ್ನು ರಚಿಸಲಾಗಿದೆ.

WhatsApp Image 2026-10-07 at 4.32.42 AM.jpeg

ಅ.11ರಂದು ಪದಗ್ರಹಣ ಕಾರ್ಯಕ್ರಮ

ನೂತನವಾಗಿ ರಚನೆಯಾದ ಜಿಲ್ಲಾ ಹಾಗೂ ತಾಲೂಕು ಸಮಿತಿಗಳ ನಿಯೋಜಿತ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಅಕ್ಟೋಬರ್ 11, 2026ರ ಭಾನುವಾರ ನವರಾತ್ರಿಯ ಶುಭ ಮುಹೂರ್ತದಲ್ಲಿ ಗುರುಪೂಜೆಯೊಂದಿಗೆ ನಡೆಯಲಿದೆ.

ಮಂಗಳೂರಿನ ಪಂಪುವೇಲ್ ಬಳಿಯ ಸುಮುಖ ಭವನ, ಕಪಿತಾನಿಯೋದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಶ್ರೀ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿ, ಪೀಠಾಧಿಪತಿಗಳು, ಮಹಾಕಾಳಿ ಮಹಾ ಸಂಸ್ಥಾನಂ, ಸದ್ಧರ್ಮ ಓಂ ಶಕ್ತಿ ಮಠ, ನಿಪ್ಪಣಿ, ಬೆಳಗಾವಿ ಇವರ ಆಶೀರ್ವಾದದೊಂದಿಗೆ ಕಾರ್ಯಕ್ರಮ ಜರುಗಲಿದೆ.

ಕಾರ್ಯಕ್ರಮವನ್ನು ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಕೆ. ಚಿತ್ತರಂಜನ್ ಗರೋಡಿ ಅವರು ಉದ್ಘಾಟಿಸಲಿದ್ದಾರೆ. ಸಮಾಜದ ಅನೇಕ ಗಣ್ಯರು ಹಾಗೂ ಪ್ರಮುಖರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಂಘಟಿತ, ಸ್ವಾಭಿಮಾನಿ ಸಮಾಜ ನಿರ್ಮಾಣದ ಆಶಯ

ನಾರಾಯಣ ಗುರುಗಳ “ಒಂದೇ ಜಾತಿ, ಒಂದೇ ಮತ, ಒಂದೇ ದೇವರು” ಎಂಬ ಮಾನವೀಯ ಸಂದೇಶ ಹಾಗೂ ಅವರ ತತ್ವ–ಆದರ್ಶಗಳ ಹಿನ್ನೆಲೆಯಲ್ಲಿ ಸಮಾಜವನ್ನು ಸಂಘಟಿತಗೊಳಿಸಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಬಲಿಷ್ಠಗೊಳಿಸುವುದು ವೇದಿಕೆಯ ಪ್ರಮುಖ ಆಶಯವಾಗಿದೆ.

ಸಮಾಜದ ಎಲ್ಲಾ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಯಶಸ್ವಿಗೊಳಿಸುವಂತೆ ಹಾಗೂ ನಾರಾಯಣ ಗುರುಗಳ ಆಶಯದಂತೆ ಸ್ವಾಭಿಮಾನಿ, ಸಶಕ್ತ, ಶೈಕ್ಷಣಿಕವಾಗಿ ಬಲಿಷ್ಠ ಮತ್ತು ಜಾಗೃತ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವಂತೆ ಶ್ರೀ ನಾರಾಯಣ ಗುರು ವಿಚಾರ ವೇದಿಕೆ (ರಿ), ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮನವಿ ಮಾಡಿದೆ.