ಹೆಜಮಾಡಿ: ‘ಕೋಟಿ–ಚೆನ್ನಯ ಅತಿರಥ ಟ್ರೋಫಿ 2026’ ರಾಜ್ಯಮಟ್ಟದ ಹಗ್ಗಜಗ್ಗಾಟ ಸ್ಪರ್ಧೆ: ಪುರುಷರ ವಿಭಾಗದಲ್ಲಿ ಕಾವಲಪದೂರು–ವಗ್ಗ, ಮಹಿಳಾ ವಿಭಾಗದಲ್ಲಿ ಬಜಗೋಳಿ ತಂಡಕ್ಕೆ ಪ್ರಥಮ ಸ್ಥಾನ
ಹೆಜಮಾಡಿ ಬಿಲ್ಲವರ ಸಂಘ (ರಿ.) ಹಾಗೂ ಯುವವಾಹಿನಿ (ರಿ.) ಹೆಜಮಾಡಿ ಘಟಕದ ಸಹಯೋಗದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಪುರುಷರ ಮತ್ತು ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆ ‘ಕೋಟಿ–ಚೆನ್ನಯ ಅತಿರಥ ಟ್ರೋಫಿ 2026’ ...

ಹೆಜಮಾಡಿ: ಹೆಜಮಾಡಿ ಬಿಲ್ಲವರ ಸಂಘ (ರಿ.) ಹಾಗೂ ಯುವವಾಹಿನಿ (ರಿ.) ಹೆಜಮಾಡಿ ಘಟಕದ ಸಹಯೋಗದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಪುರುಷರ ಮತ್ತು ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆ ‘ಕೋಟಿ–ಚೆನ್ನಯ ಅತಿರಥ ಟ್ರೋಫಿ 2026’ ನವೆಂಬರ್ 22ರಂದು ಹೆಜಮಾಡಿಯ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ನಡೆಯಿತು.
ಯುವವಾಹಿನಿ (ರಿ.) ಹೆಜಮಾಡಿ ಘಟಕದ ಅಧ್ಯಕ್ಷ ಪ್ರಥಮೇಶ್ ಪಿ. ಬಂಗೇರ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷ ವೈ. ಸುಧೀರ್ ಕುಮಾರ್ ಹಾಗೂ ಅಖಿಲ ಭಾರತ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಎನ್. ಸುವರ್ಣ ಉದ್ಘಾಟಿಸಿದರು. ಭಾರತ್ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ ಧ್ವಜಾರೋಹಣ ನೆರವೇರಿಸಿದರು. ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಟ್ರೋಫಿ ಅನಾವರಣಗೊಳಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಉದ್ಘಾಟನಾ ಸಮಾರಂಭದಲ್ಲಿ ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ದಯಾನಂದ್ ಹೆಜಮಾಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಯುವವಾಹಿನಿ ಹೆಜಮಾಡಿ ಘಟಕದ ಉಪಾಧ್ಯಕ್ಷೆ ಪ್ರಾಪ್ತಿ ಆರ್. ಸುವರ್ಣ ಸ್ವಾಗತಿಸಿದರು. ಘಟಕದ ಮಾಜಿ ಅಧ್ಯಕ್ಷ ಧೀರಜ್ ವಂದಿಸಿದರು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಪುರುಷರ ಹಾಗೂ ಮಹಿಳೆಯರ ತಂಡಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡವು. ತೀವ್ರ ಪೈಪೋಟಿಯಿಂದ ಕೂಡಿದ್ದ ಪುರುಷರ ವಿಭಾಗದಲ್ಲಿ ಬಿಲ್ಲವ ಸಮಾಜ ಸೇವಾ ಸಂಘ, ಕಾವಲಪದೂರು–ವಗ್ಗ ‘B’ ತಂಡ ಪ್ರಥಮ ಸ್ಥಾನ ಪಡೆದುಕೊಂಡರೆ, ಅದೇ ಸಂಘದ ‘A’ ತಂಡ ದ್ವಿತೀಯ ಸ್ಥಾನ ಗಳಿಸಿತು. ಬಲರಾಮ ಫ್ರೆಂಡ್ಸ್ ಮಲ್ಪೆ ತಂಡ ತೃತೀಯ ಹಾಗೂ ಕಂಬಳ ಫ್ರೆಂಡ್ಸ್ ಹೆಜಮಾಡಿ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿತು.
ಮಹಿಳೆಯರ ವಿಭಾಗದಲ್ಲಿ ಬಿಲ್ಲವ ಸಂಘ (ರಿ.) ಬಜಗೋಳಿ ತಂಡ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿತು. ಬಿಲ್ಲವ ಸಮಾಜ ಸೇವಾ ಸಂಘ, ಕಾವಲಪದೂರು–ವಗ್ಗ ತಂಡ ದ್ವಿತೀಯ, ಬಿಲ್ಲವ ಸಂಘ (ರಿ.) ನಿಟ್ಟೆ ತಂಡ ತೃತೀಯ ಹಾಗೂ ಐರನ್ ಉದ್ಯಾವರ ತಂಡ ನಾಲ್ಕನೇ ಸ್ಥಾನ ಗಳಿಸಿತು.

ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪ್ರಥಮೇಶ್ ಪಿ. ಬಂಗೇರ ವಹಿಸಿದ್ದರು. ಈ ಸಂದರ್ಭದಲ್ಲಿ ಗಣ್ಯರು ವಿಜೇತ ತಂಡಗಳಿಗೆ ಬಹುಮಾನ ಹಾಗೂ ಟ್ರೋಫಿಗಳನ್ನು ವಿತರಿಸಿ ಅಭಿನಂದಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳ ಕ್ರೀಡಾಸ್ಫೂರ್ತಿ ಮತ್ತು ಪ್ರದರ್ಶನವನ್ನು ಗಣ್ಯರು ಶ್ಲಾಘಿಸಿದರು.

ಕ್ರೀಡೆ, ಸಂಘಟನೆ ಹಾಗೂ ಸಾಮರಸ್ಯದ ಸಂದೇಶ ಸಾರಿದ ‘ಕೋಟಿ–ಚೆನ್ನಯ ಅತಿರಥ ಟ್ರೋಫಿ 2026’ ಕ್ರೀಡಾಕೂಟವು ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳ ಉತ್ಸಾಹಭರಿತ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.
