ಸುಳ್ಯ: ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಸುಳ್ಯ: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಸುಳ್ಯ ಹಾಗೂ ಯುವವಾಹಿನಿ ಸುಳ್ಯ ಘಟಕದ ವತಿಯಿಂದ 172ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ, ಗುರುಪೂಜೆ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಸೆ.20ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಸುಳ್ಯ: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಸುಳ್ಯ ಹಾಗೂ ಯುವವಾಹಿನಿ ಸುಳ್ಯ ಘಟಕದ ವತಿಯಿಂದ 172ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ, ಗುರುಪೂಜೆ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಸೆ.20ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಅಧ್ಯಕ್ಷ ಎ. ಕೃಷ್ಣಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಉಡುಪಿ ರಾಜ್ಯಶಾಸ್ತ್ರ ಉಪನ್ಯಾಸಕ ದಯಾನಂದ ಕರ್ಕೇರ ಉಗ್ಗೇಲುಬೆಟ್ಟು ಅವರು ಗುರು ಸಂದೇಶ ನೀಡಿದರು. ಮಾತನಾಡಿದ ಅವರು, “ಬ್ರಹ್ಮಶ್ರೀ ನಾರಾಯಣ ಗುರುಗಳು ಮಹತ್ಕಾರ್ಯ ಮಾಡಿದವರು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಾ ಎಲ್ಲರಿಗೂ ಅವಕಾಶ ದೊರೆಯುವಂತೆ ಮಾಡಿದ್ದಾರೆ. ಸಾಮಾಜಿಕ ಜಾಗೃತಿ ಮೂಡಿಸಿ ಸಮಾಜ ಹಾಗೂ ಸಂಸಾರ ಬೆಳಗುವಂತೆ ಮಾಡಿದ್ದಾರೆ. ಜನರಿಗೆ ವೃತ್ತಿಪರ ತರಬೇತಿ ನೀಡಲು ಸಾಕಷ್ಟು ಶ್ರಮಿಸಿದ್ದಾರೆ. ಅವರ ವಿಚಾರಧಾರೆ, ಸಂದೇಶ, ಹೋರಾಟ ಹಾಗೂ ಮನುಷ್ಯತ್ವವನ್ನು ಕಟ್ಟುವ ಚಳುವಳಿ ನಮಗೆಲ್ಲ ಪ್ರೇರಣೆಯಾಗಲಿ” ಎಂದರು.
ಯುವವಾಹಿನಿ ಕೇಂದ್ರ ಮಂಗಳೂರು ಇದರ ಪ್ರಥಮ ಉಪಾಧ್ಯಕ್ಷೆ ವಿದ್ಯಾರಾಕೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
2025-26ನೇ ಸಾಲಿನಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ದ್ವಿತೀಯ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮಂಗಳೂರು ವಿಶ್ವವಿದ್ಯಾಲಯ ನಡೆಸಿದ ಬಿಎಸ್ಪಿ ಅನಿಮೇಶನ್ ಮತ್ತು ದೃಶ್ಯ ಪರಿಣಾಮಗಳ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿನಿ ಪೂರ್ಣಾ ಸಿ. ಅವರನ್ನು ಶಾಲು ಹೊದಿಸಿ, ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಸಾರಕರೆ, ಸುಳ್ಯ ಯುವವಾಹಿನಿ ಅಧ್ಯಕ್ಷ ಮಹೇಶ್ ಕಲ್ಪಣೆ, ಕಾರ್ಯದರ್ಶಿ ರಂಜಿತ್ ದರ್ಖಾಸ್ತು, ಕಟ್ಟಡ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಅಲೆಕ್ಕಾಡಿ ಹಾಗೂ ಗೌರವಾಧ್ಯಕ್ಷ ಎನ್.ಎಸ್.ಡಿ. ವಿಶಲದಾಸ್ ಉಪಸ್ಥಿತರಿದ್ದರು.
ಶ್ರೀಮತಿ ನೂತನ ಪ್ರವೀಣ್ ನೆಟ್ಟಾರು ಸ್ವಾಗತಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಚಂದ್ರಶೇಖರ ಹೈದಂಗೂರು ಕಾರ್ಯಕ್ರಮ ನಿರೂಪಿಸಿದರು. ಯುವವಾಹಿನಿ ಮಾಜಿ ಅಧ್ಯಕ್ಷ ಹರೀಶ ಕಾವಿನಮೂಲೆ ವಂದಿಸಿದರು.
ಇದಕ್ಕೂ ಮುನ್ನ ಬೆಳಿಗ್ಗೆ ಪುರೋಹಿತರಾದ ಪಿ.ಡಿ. ಹರೀಶ ಶಾಂತಿ ಪುತ್ತೂರು ಅವರ ನೇತೃತ್ವದಲ್ಲಿ ಗುರುಪೂಜೆ ನಡೆಯಿತು. ಪೂರ್ವಾಹ್ನ ಯುವವಾಹಿನಿ ಸುಳ್ಯ ಘಟಕದ ವತಿಯಿಂದ ಭಜನಾ ಸಂಕೀರ್ತನೆ ಹಾಗೂ ಗುರುಪೂಜೆ ನೆರವೇರಿಸಲಾಯಿತು.
