Skip to content
Billava News

ಶಿಕ್ಷಣದ ಮಹತ್ವ ಸಾರಿದ ಗುರು ನಾರಾಯಣ ರಾತ್ರಿ ಪ್ರೌಢಶಾಲೆಯ ಶಿಕ್ಷಕರ ದಿನಾಚರಣೆ

ಬಿಲ್ಲವರ ಅಸೋಸಿಯೇಶನ್ ಸಂಚಾಲಿತ ಗುರು ನಾರಾಯಣ ರಾತ್ರಿ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯು ಸೆಪ್ಟೆಂಬರ್ 7ರಂದು ಸಂಜೆ 8 ಗಂಟೆಗೆ ಶಾಲಾ ಆವರಣದಲ್ಲಿ ಗೌರವಪೂರ್ವಕವಾಗಿ ಜರುಗಿತು.

By Billavavani
    ಶಿಕ್ಷಣದ ಮಹತ್ವ ಸಾರಿದ ಗುರು ನಾರಾಯಣ ರಾತ್ರಿ ಪ್ರೌಢಶಾಲೆಯ ಶಿಕ್ಷಕರ ದಿನಾಚರಣೆ

ಸಾಂತಾಕ್ರೂಜ್, ಸೆ. 12: ಬಿಲ್ಲವರ ಅಸೋಸಿಯೇಶನ್ ಸಂಚಾಲಿತ ಗುರು ನಾರಾಯಣ ರಾತ್ರಿ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯು ಸೆಪ್ಟೆಂಬರ್ 7ರಂದು ಸಂಜೆ 8 ಗಂಟೆಗೆ ಶಾಲಾ ಆವರಣದಲ್ಲಿ ಗೌರವಪೂರ್ವಕವಾಗಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಮಿತಿಯ ಕಾರ್ಯಾಧ್ಯಕ್ಷ ರವಿ ಸನಿಲ್ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ದೇಶ ಕಂಡ ಶ್ರೇಷ್ಠ ಶಿಕ್ಷಕ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ‘ಗು’ ಎಂದರೆ ಅಂಧಕಾರ, ‘ರು’ ಎಂದರೆ ಅದನ್ನು ಹೋಗಲಾಡಿಸುವವನು. ಶಿಷ್ಯರಿಗೆ ಜ್ಞಾನ ನೀಡುವವರೇ ಗುರುಗಳು. ತಾಯಿಯೇ ಮೊದಲ ಶಿಕ್ಷಕಿ. ಶಿಕ್ಷಣದ ಮೂಲಕ ವಿದ್ಯಾರ್ಥಿಗಳು ಸಂಸ್ಕಾರ, ಸಂಸ್ಕೃತಿ ಹಾಗೂ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು” ಎಂದು ಹೇಳಿದರು.

d4337799-7d29-43bc-bdef-b016fdc890ba.jpeg

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾತೃಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ. ಸಾಲಿಯಾನ್ ಮಾತನಾಡಿ, “ನಮ್ಮ ಶಾಲೆಯ ಶಿಕ್ಷಕರು ಸಮಯಪ್ರಜ್ಞೆ ಹಾಗೂ ಕರ್ತವ್ಯನಿಷ್ಠೆಗೆ ಹೆಸರುವಾಸಿಯಾಗಿದ್ದಾರೆ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ, ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ ಬಡಿಗೇರ ಹಾಗೂ ಶಿಕ್ಷಕರ ಪರಿಶ್ರಮದಿಂದ ಶಾಲೆಯು ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದೆ. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಶಿಕ್ಷಕರಿಗೆ ಸಮಾಜದಲ್ಲಿ ಉನ್ನತ ಗೌರವ ದೊರೆಯಬೇಕು” ಎಂದು ಅಭಿಪ್ರಾಯಪಟ್ಟರು.

ನಂತರ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಯನ್ನು ಪುಷ್ಪಗುಚ್ಛ ಮತ್ತು ಗುರುಕಾಣಿಕೆ ನೀಡಿ ಸನ್ಮಾನಿಸಲಾಯಿತು.

b9f650ff-083f-4fbd-ad31-cc53d2383e8b.jpeg

ಶಾಲೆಯ ಮುಖ್ಯಾಧ್ಯಾಪಕ ಮಲ್ಲಿಕಾರ್ಜುನ ಬಡಿಗೇರ ಮಾತನಾಡಿ, “ಪ್ರತಿಯೊಬ್ಬರ ಬದುಕಿನ ಯಶಸ್ಸಿನ ಹಿಂದೆ ಒಬ್ಬ ಗುರು ಇರುತ್ತಾರೆ. ರಮಾಕಾಂತ್ ಅಚ್ರೇಕರ್ ಅವರು ಸಚಿನ್ ತೆಂಡೂಲ್ಕರ್ ಅವರಿಗೆ, ಸಮರ್ಥ ರಾಮದಾಸರು ಛತ್ರಪತಿ ಶಿವಾಜಿಗೆ, ರಾಮಕೃಷ್ಣ ಪರಮಹಂಸರು ಸ್ವಾಮಿ ವಿವೇಕಾನಂದರಿಗೆ ಮಾರ್ಗದರ್ಶಕರಾಗಿದ್ದರು. ದೇಶದ ಅಭಿವೃದ್ಧಿ ಮತ್ತು ಸುರಕ್ಷತೆಯಲ್ಲಿ ಶಿಕ್ಷಕರು ಹಾಗೂ ಸೈನಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ” ಎಂದು ಹೇಳಿದರು.

ec23a49d-6044-4493-b1fc-12ea4bf4aaec.jpeg

ಶಿಕ್ಷಕ ಸಿದ್ಧರಾಮ ದಸಮಾನೆ ಮಾತನಾಡಿ, “ಶಿಕ್ಷಣದಿಂದ ಸೃಜನಶೀಲತೆ ಬೆಳೆಯುತ್ತದೆ. ಗುರಿ ಸಾಧನೆಗೆ ಗುರುವಿನ ಮಾರ್ಗದರ್ಶನ ಅಗತ್ಯ. ನೂತನ ಶಿಕ್ಷಣ ನೀತಿಯಡಿ ವಿದ್ಯಾರ್ಥಿಗಳು ಕೌಶಲ್ಯಪೂರ್ಣ ಶಿಕ್ಷಣ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕು” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ತರುಣ್ ಗುತ್ತೇದಾರ್, ಭಾವಿಶ್ ಪೂಜಾರಿ, ಸುನೀತಾ ರಾಠೋಡ್, ಸುಮನ ಫುಲೆ, ಚಾಂದಿನಿ ಚವ್ಹಾಣ್, ನೈನಾ ರಾಠೋಡ್, ರೋಹಿಣಿ ಶೆಟ್ಟಿ ಹಾಗೂ ವಿಜಯ್ ಪೂಜಾರಿ ಶಿಕ್ಷಕರ ದಿನಾಚರಣೆಯ ಮಹತ್ವದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳಾದ ಸಿದ್ಧರಾಮ ದಸಮಾನೆ, ವಿಮಲಾ ಪೂಜಾರಿ, ಲಕ್ಷ್ಮಣ ಪೂಜಾರಿ, ನಮಿತಾ ಸುವರ್ಣ ಹಾಗೂ ಹಳೆಯ ವಿದ್ಯಾರ್ಥಿಗಳಾದ ರಾಧಿಕಾ ರಾಠೋಡ್, ಸುಜಾತಾ ಪವಾರ್ ಮತ್ತು ರಾಧಿಕಾ ಭಾವಿಮನಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿಯರಾದ ಸುನೀತಾ ರಾಠೋಡ್, ಸುಮನ ಫುಲೆ, ಚಾಂದಿನಿ ಚವ್ಹಾಣ್, ಸೋನು ಚಂದ್ರು ಚವ್ಹಾಣ್, ಪಲ್ಲವಿ ರಾಠೋಡ್ ಹಾಗೂ ನೈನಾ ರಾಠೋಡ್ ಪ್ರಾರ್ಥನೆ ನೆರವೇರಿಸಿದರು. ಸೋನು ಚಂದ್ರು ಚವ್ಹಾಣ್ ಕಾರ್ಯಕ್ರಮ ನಿರೂಪಿಸಿ, ಸಂಗೀತಾ ಚಂದ್ರು ಚವ್ಹಾಣ್ ವಂದಿಸಿದರು.