ದೇವಸ್ಥಾನಗಳು ಪರಿವರ್ತನೆಯ ಕೇಂದ್ರವಾಗಬೇಕು: ಡಾ. ಸದಾನಂದ ಪೂಜಾರಿ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ.), ಬಜಪೆ–ಕರಂಬಾರು ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಅಂಗವಾಗಿ ಧಾರ್ಮಿಕ ಸಭಾ ಕಾರ್ಯಕ್ರಮವು ಗುರುವಾರ ಶಿವರಾಮ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಬಜಪೆ, ಆ. 28: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ.), ಬಜಪೆ–ಕರಂಬಾರು ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಅಂಗವಾಗಿ ಧಾರ್ಮಿಕ ಸಭಾ ಕಾರ್ಯಕ್ರಮವು ಗುರುವಾರ ಶಿವರಾಮ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಖ್ಯಾತ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿ, “ಬ್ರಹ್ಮಶ್ರೀ ನಾರಾಯಣ ಗುರುಗಳು ಶಿಕ್ಷಣಕ್ಕೆ ಅತ್ಯಂತ ಮಹತ್ವ ನೀಡಿ ದೇವಸ್ಥಾನಗಳ ಸ್ಥಾಪನೆಯ ಮೂಲಕ ಸಮಾಜದಲ್ಲಿದ್ದ ಅಸ್ಪೃಶ್ಯತೆಯನ್ನು ನಿವಾರಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ದೇವಸ್ಥಾನಗಳು ಕೇವಲ ಭಕ್ತಿಯ ಕೇಂದ್ರಗಳಾಗದೆ ಸಮಾಜ ಪರಿವರ್ತನೆಯ ಕೇಂದ್ರಗಳಾದಾಗ ಮಾತ್ರ ನಾರಾಯಣ ಗುರುಗಳ ತತ್ವಾದರ್ಶಗಳು ಸಾರ್ಥಕವಾಗುತ್ತವೆ” ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀಮತಿ ಗುಣವತಿ ರಮೇಶ್, ಬಜಪೆ ಗುರುಮಂದಿರದಲ್ಲಿ ವರ್ಷಂಪ್ರತಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ಪುರಸ್ಕಾರ ಹಾಗೂ ಆರೋಗ್ಯ ನಿಧಿಗಳ ಮೂಲಕ ಸಮಾಜ ಸೇವಾ ಕಾರ್ಯಗಳನ್ನು ನಡೆಸಲಾಗುತ್ತಿದ್ದು, ನಾರಾಯಣ ಗುರುಗಳ ಆದರ್ಶಗಳನ್ನು ಅನುಷ್ಠಾನಗೊಳಿಸುವಲ್ಲಿ ಸಂಘವು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ “ನಾರಾಯಣ ಗುರು ಸಚ್ಚರಿತೆ – ಭಾಗ 1” ಗ್ರಂಥವನ್ನು ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಲೋಕೇಶ್ ಪೂಜಾರಿ ಬಿಡುಗಡೆಗೊಳಿಸಿದರು.

ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಕುಮಾರ ಸನ್ಮಯ್ ಎಸ್. ಪೂಜಾರಿ, ಕುಮಾರಿ ಸಾನ್ವಿ ಎಸ್. ಪೂಜಾರಿ ಹಾಗೂ ಕಲಾ ಕ್ಷೇತ್ರದಲ್ಲಿ ಸಾಧನೆಗೈದ ಕುಮಾರಿ ಶ್ರಾವ್ಯ ಕೆ. ತಲಕಲ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಪತ್ರಗಳನ್ನು ಮಿಥುನ್, ಶ್ರೀಮತಿ ಜಯಶ್ರೀ ನಾಗೇಶ್ ಹಾಗೂ ಶ್ರೀಮತಿ ಗೀತಾ ಪ್ರಶಾಂತ್ ವಾಚಿಸಿದರು.

ವಿದ್ಯಾನಿಧಿಗೆ ಗಣನೀಯ ಆರ್ಥಿಕ ನೆರವು ನೀಡಿದ ಶ್ರೀಮತಿ ಸಂದ್ಯಾ ಕುಲಾಯಿ ಹಾಗೂ ಪದ್ಮನಾಭ ಪೂಜಾರಿ ಅವರನ್ನು ಗೌರವಿಸಲಾಯಿತು. ಇದೇ ವೇಳೆ ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಪ್ರಥಮ ಬಾರಿಗೆ ಆಯ್ಕೆಯಾದ ಲೋಕೇಶ್ ಪೂಜಾರಿ ಅವರನ್ನು ಅಭಿನಂದಿಸಲಾಯಿತು.

ಸಂಘದ ಆರೋಗ್ಯ ನಿಧಿಯಿಂದ ಆರ್ಥಿಕ ಸಂಕಷ್ಟ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಪುರಂದರ ಪೂಜಾರಿ ಮತ್ತು ಶೇಖರ ಪೂಜಾರಿ ಅವರಿಗೆ ವೈದ್ಯಕೀಯ ನೆರವು ವಿತರಿಸಲಾಯಿತು.

ಪರಿಸರ ಸ್ನೇಹಿ ಸಮಾಜಮುಖಿ ಸೇವೆಗಾಗಿ ಹೆಸರಾದ ಹಸಿರು ದಳ ಮಂಗಳೂರು ಸಂಸ್ಥೆಗೆ ಸಂಘದ ವ್ಯಾಪ್ತಿಯಲ್ಲಿ ಸಂಗ್ರಹಿಸಲಾದ 150 ಬಳಕೆಯ ಸೀರೆಗಳನ್ನು ಹಸ್ತಾಂತರಿಸಲಾಯಿತು. ಸೀರೆಗಳಿಂದ ತಯಾರಿಸಿದ ಕೈಚೀಲವನ್ನು ಹಸಿರು ದಳದ ಸದಸ್ಯರು ಸಭಾಧ್ಯಕ್ಷರಿಗೆ ವಿಶೇಷ ಉಡುಗೊರೆಯಾಗಿ ನೀಡಿದರು.

ಪ್ರತಿಭಾ ಅನಾವರಣ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ 15 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ಪುರಸ್ಕಾರ ನೀಡಿ ಗೌರವಿಸಲಾಯಿತು.

ಉಪಾಧ್ಯಕ್ಷ ಚಿತ್ತರಂಜನ್ ಸಾಲ್ಯಾನ್, ಕೋಶಾಧಿಕಾರಿ ಪದ್ಮನಾಭ ಬಿ., ಯುವವಾಹಿನಿ ಬಜಪೆ ಘಟಕದ ಅಧ್ಯಕ್ಷ ರೋಹಿತ್ ಪೂಜಾರಿ ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀಮತಿ ಸುಚಿತಾ ದೇವರಾಜ್ ಪ್ರಾರ್ಥಿಸಿದರು. ದೇವರಾಜ್ ಅಮೀನ್ ಹಾಗೂ ನಿತೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಜಿತೇಶ್ ಸಾಲ್ಯಾನ್ ಸ್ವಾಗತಿಸಿ, ಸಂದೀಪ್ ಕುಮಾರ್ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಸದಸ್ಯರಿಂದ ಮನರಂಜನಾ ನೃತ್ಯಗಳು ಹಾಗೂ “ರಿಕ್ಷಾ ಡ್ರೈವರ್” ಕಿರುನಾಟಕ ಪ್ರದರ್ಶನಗೊಂಡಿತು.


