ತುಳು ರಂಗಭೂಮಿಯ ಹೆಮ್ಮೆಯ ಕಲಾವಿದ ರಾಕೇಶ್ ಕಟಪಾಡಿಗೆ ‘ರಂಗದ ಮಾಣಿಕ್ಯ’ ಬಿರುದು
ತುಳು ರಂಗಭೂಮಿ, ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತಮ್ಮ ಅದ್ಭುತ ಅಭಿನಯ ಮತ್ತು ...

ಉಡುಪಿ, ಆ. 1: ತುಳು ರಂಗಭೂಮಿ, ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತಮ್ಮ ಅದ್ಭುತ ಅಭಿನಯ ಮತ್ತು ಬಹುಮುಖ ಪ್ರತಿಭೆಯ ಮೂಲಕ ಜನಮನ ಗೆದ್ದಿರುವ ಖ್ಯಾತ ಕಲಾವಿದ ರಾಕೇಶ್ ಕಟಪಾಡಿ ಅವರಿಗೆ ‘ರಂಗದ ಮಾಣಿಕ್ಯ’ ಬಿರುದಿನೊಂದಿಗೆ ಗೌರವ ಸನ್ಮಾನ ನೀಡಲಾಗಿದೆ.
ರಾಮ ಕರ್ಕೇರ ಹಾಗೂ ಸುಮತಿ ಕರ್ಕೇರ ದಂಪತಿಯ ಪುತ್ರರಾದ ರಾಕೇಶ್ ಕಟಪಾಡಿ ಅವರು ಕಟಪಾಡಿಯ ಹೆಸರನ್ನು ಕಲೆಯ ಮೂಲಕ ರಾಜ್ಯದಾದ್ಯಂತ ಪರಿಚಿತಗೊಳಿಸಿದ್ದಾರೆ. ವೃತ್ತಿಯಲ್ಲಿ ಟೈಲರಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರೂ, ಪ್ರವೃತ್ತಿಯಾಗಿ ರಂಗಭೂಮಿ, ನೃತ್ಯ, ಯಕ್ಷಗಾನ, ಸಂಗೀತ ಹಾಗೂ ಸಮಾಜಸೇವೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
2010ರಲ್ಲಿ ರವಿಕುಮಾರ್ ಕಡೆಕಾರ್ ನಿರ್ದೇಶನದ ‘ಪಾನ್ ಬೀಡ ಪಾಂಡುರಂಗೆ’ ನಾಟಕದ ಮೂಲಕ ರಂಗಭೂಮಿ ಪ್ರವೇಶಿಸಿದ ಅವರು, ನಂತರ ಸನ್ನಿಧಿ ಕಲಾವಿದರು ಹಾಗೂ ‘ಅಭಿನಯ ತಂಡ’ದ ಪ್ರಮುಖ ಕಲಾವಿದರಾಗಿ ನೂರಾರು ಯಶಸ್ವಿ ಪ್ರದರ್ಶನಗಳನ್ನು ನೀಡಿದ್ದಾರೆ. ‘ಬಲೆ ತೆಲಿಪಾಲೆ’ ಹಾಸ್ಯ ರಿಯಾಲಿಟಿ ಶೋ ಹಾಗೂ ಕಲರ್ಸ್ ಕನ್ನಡದ ‘ಮಜಾ ಭಾರತ’ ಕಾರ್ಯಕ್ರಮಗಳ ಮೂಲಕ ಮನೆಮಾತಾದ ಅವರು, ಹಾಸ್ಯ ಮತ್ತು ಭಾವನಾತ್ಮಕ ಪಾತ್ರಗಳಲ್ಲಿ ಸಮಾನವಾಗಿ ಮಿಂಚಿದ್ದಾರೆ.
‘ಪಾನ್ ಬೀಡ ಪಾಂಡುರಂಗೆ’, ‘ಬರ್ಪೆಂತಿನಾಯೆ ಬೈದಿಜೆ’, ‘ಉಂದು ಎಂಚಿನ’, ‘ಈ ದಾಯೆ ಬತ್ತ’, ‘3ಡಿ’, ‘ಶಾಂಭವಿ’ ಸೇರಿದಂತೆ ಅನೇಕ ತುಳು ನಾಟಕಗಳಲ್ಲಿ ಅಭಿನಯಿಸಿರುವ ಅವರು ಸಾವಿರಾರು ಪ್ರದರ್ಶನಗಳ ಮೂಲಕ ಕಲಾಭಿಮಾನಿಗಳ ಮೆಚ್ಚುಗೆ ಪಡೆದಿದ್ದಾರೆ. ಯಕ್ಷಗಾನದಲ್ಲಿಯೂ ‘ಕೋಟಿ-ಚೆನ್ನಯ’ ಪ್ರಸಂಗದ ಪೈಯ ಬೈದನ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ.
ನೃತ್ಯ ನಿರ್ದೇಶಕರಾಗಿಯೂ ಗುರುತಿಸಿಕೊಂಡಿರುವ ರಾಕೇಶ್ ಕಟಪಾಡಿ ಅವರು ಮಲಯಾಳಂ ಹಾಗೂ ಕನ್ನಡ ಆಲ್ಬಂಗಳಿಗೆ ನೃತ್ಯ ಸಂಯೋಜನೆ ಮಾಡಿದ್ದು, ವಿಶೇಷ ಸಾಮರ್ಥ್ಯದ ಮಕ್ಕಳಿಗೆ ಉಚಿತ ನೃತ್ಯ ತರಬೇತಿ ನೀಡಿ ಸಮಾಜಮುಖಿ ಸೇವೆಯನ್ನೂ ಸಲ್ಲಿಸಿದ್ದಾರೆ.
2019ರಲ್ಲಿ ನಡೆದ ತುಳು ನಾಟಕ ಸ್ಪರ್ಧೆಯಲ್ಲಿ ಶ್ರೇಷ್ಠ ಹಾಸ್ಯ ನಟ ಪ್ರಥಮ ಪ್ರಶಸ್ತಿ ಪಡೆದಿರುವ ಅವರು, ಬಳಿಕ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲೂ ಅವಕಾಶ ಪಡೆದು ‘ಪ್ರೇಮ ಗೀಮ ಜಾನೆ ದೊ’, ‘ಶಂಕರಾಭರಣ’, ‘ಕಾರ್ನಿಕದ ಕಲ್ಲುರ್ಟಿ’, ‘ಐಸಬ್ಬಾಸ್’ ಸೇರಿದಂತೆ ಹಲವು ಚಿತ್ರ ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.
ಸ್ವಸ್ತಿಕ್ ಕಲಾ ಸಂಘ, ಯುವವಾಹಿನಿ ಉಡುಪಿ ಘಟಕ, ಜೆಸಿಐ ಕಟಪಾಡಿ ಸೇರಿದಂತೆ ಹಲವು ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆಗಳಲ್ಲಿ ಸಕ್ರಿಯರಾಗಿರುವ ರಾಕೇಶ್ ಕಟಪಾಡಿ ಅವರಿಗೆ ‘ರಂಗದ ಮಾಣಿಕ್ಯ’ ಬಿರುದು ಲಭಿಸಿರುವುದು ತುಳು ರಂಗಭೂಮಿ ಹಾಗೂ ಕಲಾಭಿಮಾನಿಗಳಿಗೆ ಹೆಮ್ಮೆಯ ಕ್ಷಣವಾಗಿದೆ.
