ತುಳುನಾಡು ಕೇವಲ ಭಾಷೆಯ ಮಾನ್ಯತೆಯನ್ನಷ್ಟೇ ಪಡೆಯದೆ ತನ್ನ ಸಾಂಸ್ಕೃತಿಕ ಅಸ್ಮಿತೆಯನ್ನು ಮತ್ತಷ್ಟು ಗಟ್ಟಿಗೊಳಿಸಿದಂತಾಗಿದೆ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್ ಪೂಜಾರಿ
ತುಳು ಭಾಷೆಗೆ ಕರ್ನಾಟಕ ಸರ್ಕಾರದ ಹಂತದಲ್ಲಿ ಅಧಿಕೃತ ಭಾಷಾ ಮಾನ್ಯತೆ ದೊರೆತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಲ್ಲಿ ಐತಿಹಾಸಿಕ ಸಾಧನೆಯನ್ನು ಪಟಾಕಿ ಸಿಡಿಸಿ ಹಾಗೂ ಸಿಹಿ ಹಂಚುವ ಮೂಲಕ ಕಾರ್ಯಕರ್ತರು ಸಂಭ್ರಮಿಸಿದರು.

ಮಂಗಳೂರು: ತುಳು ಭಾಷೆಗೆ ಕರ್ನಾಟಕ ಸರ್ಕಾರದ ಹಂತದಲ್ಲಿ ಅಧಿಕೃತ ಭಾಷಾ ಮಾನ್ಯತೆ ದೊರೆತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಲ್ಲಿ ಐತಿಹಾಸಿಕ ಸಾಧನೆಯನ್ನು ಪಟಾಕಿ ಸಿಡಿಸಿ ಹಾಗೂ ಸಿಹಿ ಹಂಚುವ ಮೂಲಕ ಕಾರ್ಯಕರ್ತರು ಸಂಭ್ರಮಿಸಿದರು.
ತುಳು ಭಾಷೆಗೆ ಮಾನ್ಯತೆ ದೊರೆತಿರುವುದು ಕರಾವಳಿ ಸೇರಿದಂತೆ ರಾಜ್ಯದಾದ್ಯಂತ ಇರುವ ತುಳು ಭಾಷಿಕರಿಗೆ ಮಹತ್ವದ ಹಾಗೂ ಸಂತಸದ ವಿಚಾರವಾಗಿದೆ. ದಶಕಗಳ ಕಾಲ ತುಳು ಭಾಷೆಯ ಮಾನ್ಯತೆಗಾಗಿ ನಡೆದ ಹೋರಾಟಕ್ಕೆ ಇದೀಗ ಫಲ ದೊರೆತಿದೆ ಎಂಬ ಭಾವನೆ ತುಳು ಭಾಷಿಕರಲ್ಲಿ ವ್ಯಕ್ತವಾಗಿದೆ.
ತುಳು ಭಾಷೆಯ ಹಿತಾಸಕ್ತಿಗಾಗಿ ಹಲವು ವರ್ಷಗಳಿಂದ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್ ಪೂಜಾರಿ, ತುಳು ಭಾಷೆಗೆ ಮಾನ್ಯತೆ ನೀಡಿರುವುದು ಕರಾವಳಿಯ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
ಈ ನಿರ್ಧಾರ ಕೈಗೊಳ್ಳುವಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಾಯಕತ್ವಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ತುಳುನಾಡು ಈ ಮೂಲಕ ಕೇವಲ ಭಾಷೆಯ ಮಾನ್ಯತೆಯನ್ನಷ್ಟೇ ಪಡೆಯದೆ ತನ್ನ ಸಾಂಸ್ಕೃತಿಕ ಅಸ್ಮಿತೆಯನ್ನು ಮತ್ತಷ್ಟು ಗಟ್ಟಿಗೊಳಿಸಿದಂತಾಗಿದೆ ಎಂದು ಅಭಿಪ್ರಾಯಪಟ್ಟರು.
ತುಳು ಭಾಷೆಯ ಬೆಳವಣಿಗೆ ಹಾಗೂ ಸಂರಕ್ಷಣೆಗೆ ಈ ಮಾನ್ಯತೆ ಹೊಸ ಅವಕಾಶಗಳನ್ನು ಕಲ್ಪಿಸಲಿದೆ ಎಂಬ ಆಶಾಭಾವನೆ ತುಳು ಭಾಷಿಕರಲ್ಲಿ ಮೂಡಿದೆ.
