Skip to content
Tulunadu Special

ಜರ್ಮನಿಯ ಬರ್ಲಿನ್‌ನಲ್ಲಿ ತುಳುವರ ಸಂಭ್ರಮ: ಸಮ್ಮರ್ ಫೆಸ್ಟ್ ಹಾಗೂ ಆಟಿದೊಂಜಿ ದಿನ ಆಚರಣೆ, ವಿದೇಶದಲ್ಲೂ ತುಳುನಾಡಿನ ಸಂಸ್ಕೃತಿಗೆ ಜೀವಂತಿಕೆ

ಜರ್ಮನಿಯ ರಾಜಧಾನಿ ಬರ್ಲಿನ್‌ನಲ್ಲಿ ನೆಲೆಸಿರುವ ತುಳುವರು "ಕುಡ್ಲ ಇನ್ ಬರ್ಲಿನ್" ಸಂಘಟನೆಯ ಆಶ್ರಯದಲ್ಲಿ ಸಮ್ಮರ್ ಫೆಸ್ಟ್ ಹಾಗೂ ಆಟಿದೊಂಜಿ ದಿನವನ್ನು ಸಂಭ್ರಮದಿಂದ ಆಚರಿಸಿದರು.

By Billavavani
ಜರ್ಮನಿಯ ಬರ್ಲಿನ್‌ನಲ್ಲಿ ತುಳುವರ ಸಂಭ್ರಮ: ಸಮ್ಮರ್ ಫೆಸ್ಟ್ ಹಾಗೂ ಆಟಿದೊಂಜಿ ದಿನ ಆಚರಣೆ, ವಿದೇಶದಲ್ಲೂ ತುಳುನಾಡಿನ ಸಂಸ್ಕೃತಿಗೆ ಜೀವಂತಿಕೆ

ಬರ್ಲಿನ್, ಜು. 26: ಜರ್ಮನಿಯ ರಾಜಧಾನಿ ಬರ್ಲಿನ್‌ನಲ್ಲಿ ನೆಲೆಸಿರುವ ತುಳುವರು "ಕುಡ್ಲ ಇನ್ ಬರ್ಲಿನ್" ಸಂಘಟನೆಯ ಆಶ್ರಯದಲ್ಲಿ ಸಮ್ಮರ್ ಫೆಸ್ಟ್ ಹಾಗೂ ಆಟಿದೊಂಜಿ ದಿನವನ್ನು ಸಂಭ್ರಮದಿಂದ ಆಚರಿಸಿದರು. ಸುಮಾರು 120ಕ್ಕೂ ಹೆಚ್ಚು ತುಳುವರು, ಕುಟುಂಬಸ್ಥರು, ವಿದ್ಯಾರ್ಥಿಗಳು ಹಾಗೂ ವಿವಿಧ ವೃತ್ತಿಪರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದೇಶದಲ್ಲಿದ್ದರೂ ತುಳುನಾಡಿನ ಸಂಸ್ಕೃತಿ, ಪರಂಪರೆ ಮತ್ತು ಸಹೋದರತ್ವವನ್ನು ಮೆರೆದರು.

ಸೋಹನ್ ಹೆಗ್ಡೆ ಅವರ ನೇತೃತ್ವದಲ್ಲಿ ತುಳುನಾಡಿನ ಯುವಕರ ತಂಡ "ಕುಡ್ಲ ಇನ್ ಬರ್ಲಿನ್" ಸಂಘಟನೆಯ ಮೂಲಕ ಈ ಕಾರ್ಯಕ್ರಮವನ್ನು ಸಂಪೂರ್ಣ ಸ್ವಯಂಸೇವಕರ ಸಹಕಾರದಿಂದ ಉಚಿತವಾಗಿ ಆಯೋಜಿಸಿತು. ಆಯೋಜಕರ ಸೇವಾಭಾವ ಹಾಗೂ ಶ್ರಮವನ್ನು ಮೆಚ್ಚಿದ ಅನೇಕರು ಸ್ವಯಂಪ್ರೇರಿತವಾಗಿ ದೇಣಿಗೆ ನೀಡಿ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿದರು.

IMG_3505.jpeg

ಇತ್ತೀಚಿನ ವರ್ಷಗಳಲ್ಲಿ ತುಳುನಾಡಿನಿಂದ ಜರ್ಮನಿಗೆ ವಲಸೆ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅಲ್ಲಿನ ತುಳುವರನ್ನು ಒಗ್ಗೂಡಿಸುವ ಹಾಗೂ ಸಾಂಸ್ಕೃತಿಕ ಬಾಂಧವ್ಯವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಯಿತು. ವಿವಿಧ ವಯೋಮಾನದವರು ಒಂದೇ ವೇದಿಕೆಯಲ್ಲಿ ಸೇರಿ ಸ್ನೇಹ, ಸಂಸ್ಕೃತಿ ಮತ್ತು ನೆನಪುಗಳನ್ನು ಹಂಚಿಕೊಂಡರು.

IMG_3506.jpeg

ಕಾರ್ಯಕ್ರಮದಲ್ಲಿ ತುಳುನಾಡಿನ ಸಾಂಪ್ರದಾಯಿಕ ತಿಂಡಿ-ತಿನಿಸುಗಳ ಸವಿಯನ್ನು ಎಲ್ಲರೂ ಆಸ್ವಾದಿಸಿದರು. ಜೊತೆಗೆ ಲಗೋರಿ ಸೇರಿದಂತೆ ಹಲವು ಸಾಂಪ್ರದಾಯಿಕ ಆಟಗಳು ಎಲ್ಲರನ್ನೂ ರಂಜಿಸಿ, ಮಕ್ಕಳಿಂದ ಹಿರಿಯರವರೆಗೆ ಉತ್ಸಾಹದಿಂದ ಭಾಗವಹಿಸುವಂತೆ ಮಾಡಿತು.

ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಜರ್ಮನಿಯಲ್ಲಿ ನೆಲೆಸಿರುವ ತುಳು ಭಾಷೆ ಹಾಗೂ ಸಂಸ್ಕೃತಿಯ ಪ್ರಚಾರಕಿ, ಜನಪ್ರಿಯ ತುಳು ಕಂಟೆಂಟ್ ಕ್ರಿಯೇಟರ್ ಡಾ. ಪ್ರತೀಕ್ಷಾ ಶೆಟ್ಟಿ ಮೀನಾರ್ ಭಾಗವಹಿಸಿ ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ತುಳುನಾಡಿನಿಂದ ಜರ್ಮನಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ವೃತ್ತಿಪರರು ಆಗಮಿಸುತ್ತಿದ್ದಾರೆ. ಅವರು ಜರ್ಮನಿಯ ಸಮಾಜದೊಂದಿಗೆ ಉತ್ತಮವಾಗಿ ಬೆರೆತು ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡುತ್ತಿದ್ದರೂ, ತಮ್ಮ ಭಾಷೆ, ಸಂಸ್ಕೃತಿ, ಸಂಪ್ರದಾಯ ಮತ್ತು ತುಳುವರ ಸಹೋದರತ್ವವನ್ನು ಉಳಿಸಿಕೊಳ್ಳಲು ವಿಶೇಷ ಕಾಳಜಿ ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಇಂತಹ "ಕುಡ್ಲ ಇನ್ ಬರ್ಲಿನ್" ಸಂಘಟನೆಗಳ ಪ್ರಯತ್ನಗಳು ವಿದೇಶದಲ್ಲಿರುವ ತುಳುವರನ್ನು ಒಗ್ಗೂಡಿಸಿ, ಮುಂದಿನ ಪೀಳಿಗೆಗೆ ತುಳುನಾಡಿನ ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಯನ್ನು ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು.

ಬರ್ಲಿನ್‌ನಲ್ಲಿ ನಡೆದ ಈ ಸಮ್ಮರ್ ಫೆಸ್ಟ್ ಹಾಗೂ ಆಟಿದೊಂಜಿ ದಿನಾಚರಣೆ ಜರ್ಮನಿಯಲ್ಲಿರುವ ತುಳುವರ ಒಗ್ಗಟ್ಟು, ಸಂಸ್ಕೃತಿಪ್ರೀತಿ ಮತ್ತು ಸಮುದಾಯದ ಬಲವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.