ಕುದ್ರೋಳಿಯಲ್ಲಿ ಶ್ರದ್ಧಾಭಕ್ತಿಯಿಂದ ವರಮಹಾಲಕ್ಷ್ಮೀ ಪೂಜೆ; ಸಹಸ್ರಾರು ಮಾತೆಯರ ಭಾಗಿ
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಕ್ಷೇತ್ರಾಡಳಿತ ಸಮಿತಿಯ ವತಿಯಿಂದ ಶುಕ್ರವಾರ ಶ್ರೀ ವರಮಹಾಲಕ್ಷ್ಮೀ ಪೂಜೆಯನ್ನು ಶ್ರದ್ಧಾಭಕ್ತಿ ಪೂರ್ವಕವಾಗಿ ನೆರವೇರಿಸಲಾಯಿತು.

ಮಂಗಳೂರು, ಆ. 28: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಕ್ಷೇತ್ರಾಡಳಿತ ಸಮಿತಿಯ ವತಿಯಿಂದ ಶುಕ್ರವಾರ ಶ್ರೀ ವರಮಹಾಲಕ್ಷ್ಮೀ ಪೂಜೆಯನ್ನು ಶ್ರದ್ಧಾಭಕ್ತಿ ಪೂರ್ವಕವಾಗಿ ನೆರವೇರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಶ್ರೀ ಅನ್ನಪೂರ್ಣೇಶ್ವರಿ ದೇವಿಗೆ ವಿಶೇಷ ಅಭಿಷೇಕ ನಡೆಯಿತು. ಬಳಿಕ ಶ್ರೀ ಗೋಕರ್ಣನಾಥ ಕಲ್ಯಾಣ ಮಂಟಪದ ವೇದಿಕೆಯಲ್ಲಿ ಕಲಶ ಪ್ರತಿಷ್ಠಾಪನೆ, ಲಲಿತಾ ಸಹಸ್ರನಾಮ ಪಠಣ, ಭಜನೆ ಹಾಗೂ ಶ್ರೀ ವರಮಹಾಲಕ್ಷ್ಮೀ ಪೂಜೆ ನೆರವೇರಿತು. ಮಧ್ಯಾಹ್ನ ದೇವಿಗೆ ಮಹಾಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ಪೂಜಾ ಕಾರ್ಯಕ್ರಮದಲ್ಲಿ ಸಹಸ್ರಾರು ಮಾತೆಯರು ಭಕ್ತಿಭಾವದಿಂದ ಪಾಲ್ಗೊಂಡರು. ಕ್ಷೇತ್ರಾಡಳಿತ ಸಮಿತಿಯ ವತಿಯಿಂದ ಭಾಗವಹಿಸಿದ ಮಾತೆಯರಿಗೆ ಬಾಗಿನ ವಿತರಿಸಲಾಯಿತು. ಇದೇ ವೇಳೆ ಸುಮಾರು 10 ಸಾವಿರಕ್ಕೂ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಟ್ರಸ್ಟಿಗಳಾದ ಸಂತೋಷ್ ಜೆ. ಪೂಜಾರಿ, ಸಾಯಿರಾಮ್ ಎಚ್.ಎಸ್., ಕಿಶೋರ್ ದಂಡೆಕೇರಿ, ಕೃತೀನ್ ಧೀರಜ್ ಅಮೀನ್, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಾ. ಬಿ.ಜಿ. ಸುವರ್ಣ ಹಾಗೂ ಸದಸ್ಯರಾದ ಪಿ.ಕೆ. ಗೌರಿ ರಾಜಶೇಖರ್, ಲತೀಶ್ ಸುವರ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
