Skip to content
Billava News

ತುಳು, ಕನ್ನಡ ಹಾಗೂ ಮರಾಠಿ ರಂಗಭೂಮಿಯ ಹಿರಿಯ ರಂಗನಟಿ ಚಂದ್ರಪ್ರಭಾ ಸುಧಾಕರ ಉದ್ಯಾವರ ಇನ್ನಿಲ್ಲ

ತುಳು, ಕನ್ನಡ ಹಾಗೂ ಮರಾಠಿ ರಂಗಭೂಮಿಯಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದ ಹಿರಿಯ ರಂಗ ಕಲಾವಿದೆ ಶ್ರೀಮತಿ ಚಂದ್ರಪ್ರಭಾ ಸುಧಾಕರ ಉದ್ಯಾವರ

By Billavavani
ತುಳು, ಕನ್ನಡ ಹಾಗೂ ಮರಾಠಿ ರಂಗಭೂಮಿಯ ಹಿರಿಯ ರಂಗನಟಿ ಚಂದ್ರಪ್ರಭಾ ಸುಧಾಕರ ಉದ್ಯಾವರ ಇನ್ನಿಲ್ಲ

ಮುಂಬಯಿ: ತುಳು, ಕನ್ನಡ ಹಾಗೂ ಮರಾಠಿ ರಂಗಭೂಮಿಯಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದ ಹಿರಿಯ ರಂಗ ಕಲಾವಿದೆ ಶ್ರೀಮತಿ ಚಂದ್ರಪ್ರಭಾ ಸುಧಾಕರ ಉದ್ಯಾವರ (1945–2026) ಅವರು ಆಗಸ್ಟ್ 25, 2026ರಂದು ನಿಧನರಾಗಿದ್ದಾರೆ. ಅವರ ಅಗಲಿಕೆ ತುಳು ಹಾಗೂ ಕನ್ನಡ ರಂಗಭೂಮಿ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.

ಖ್ಯಾತ ರಂಗತಜ್ಞ ಕೆ. ಕೆ. ಸುವರ್ಣ ಅವರ ಪುತ್ರಿಯಾಗಿದ್ದ ಚಂದ್ರಪ್ರಭಾ ಅವರು ತಮ್ಮ ತಂದೆಯ ನಾಟಕಗಳಲ್ಲಿ ಅಭಿನಯಿಸುವ ಮೂಲಕ ರಂಗಭೂಮಿಗೆ ಪ್ರವೇಶಿಸಿ, ಆರಂಭದಲ್ಲೇ ಅಭಿನಯದ ಅನುಭವವನ್ನು ಗಳಿಸಿಕೊಂಡರು. ಬಳಿಕ ಮರಾಠಿ ರಂಗಭೂಮಿಯಲ್ಲಿಯೂ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ, ಹಲವಾರು ಮರಾಠಿ ನಾಟಕಗಳಲ್ಲಿ ಗಮನಾರ್ಹ ಪಾತ್ರಗಳನ್ನು ನಿರ್ವಹಿಸಿದರು.

ಪ್ರಭಾಕರ್ ಪನ್ಶಿಕರ್ ಅವರ ‘ತೋ ಮಿ ನವೇಚ್’ ಮರಾಠಿ ನಾಟಕದ ಮೂಲಕ ಖ್ಯಾತಿ ಪಡೆದ ಚಂದ್ರಪ್ರಭಾ ಅವರು ಮರಾಠಿಯ ಹಲವು ನಾಟಕ ಮಂಡಳಿಗಳಲ್ಲಿ ಅಭಿನಯಿಸಿದ್ದರು. ನಂತರ ತುಳು ಮತ್ತು ಕನ್ನಡ ರಂಗಭೂಮಿಯ ವಿವಿಧ ನಾಟಕ ಸಂಸ್ಥೆಗಳೊಂದಿಗೆ ಗುರುತಿಸಿಕೊಂಡು, ತಮ್ಮ ಸಹಜ ಹಾಗೂ ಮನೋಜ್ಞ ಅಭಿನಯದ ಮೂಲಕ ರಂಗಭೂಮಿಯನ್ನು ಶ್ರೀಮಂತಗೊಳಿಸಿದರು.

ಕಲಾ ಜಗತ್ತಿನ ವಿಜಯ ಕುಮಾರ್ ಶೆಟ್ಟಿ, ಸುವರ್ಣ ಜ್ಯೋತಿಯ ವಿ. ಕೆ. ಸುವರ್ಣ ಪಡುಬಿದ್ರಿ, ಅಭಿನಯ ಮಂಟಪದ ಕರುಣಾಕರ ಕಾಪು, ಅಭಿನಯ ಸಾಮ್ರಾಜ್ಯದ ಜಯರಾಮ್ ಆಳ್ವ, ವೀರ ಕೇಸರಿ ಕಲಾವೃಂದದ ರಮೇಶ್ ಶಿವಪುರ, ನವೋದಯದ ಶ್ರೀನಾಥ್ ಮುಲ್ಕಿ, ಉದಯರಂಗದ ದೇವುದಾಸ್ ಸಾಲ್ಯಾನ್, ರಂಗಧ್ವನಿಯ ಜಗದೀಶ್ ಕೆಂಚನಕೆರೆ, ಜಗಜ್ಯೋತಿ ಕಲಾವೃಂದದ ಸಾ. ದಯಾ ಸೇರಿದಂತೆ ಹಲವು ರಂಗ ಸಂಸ್ಥೆಗಳೊಂದಿಗೆ ಅವರು ಕೆಲಸ ಮಾಡಿದ್ದರು.

ಅದೇ ರೀತಿ ಎಸ್. ಎಸ್. ಕಾರ್ಕಳ್, ಬಿ. ಎಂ. ವಸಂತ್ ಸೇರಿದಂತೆ ಹಲವು ನಿರ್ದೇಶಕರ ಮಾರ್ಗದರ್ಶನದಲ್ಲಿ ಅಭಿನಯಿಸಿದ ಚಂದ್ರಪ್ರಭಾ ಅವರು ಮುಂಬಯಿ ಸೇರಿದಂತೆ ವಿವಿಧೆಡೆಗಳ ತುಳು-ಕನ್ನಡ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ಮುಂಬಯಿ ರಂಗಭೂಮಿಯ ಪ್ರಬುದ್ಧ ಕಲಾವಿದರಾದ ವಾಮನ್ ರಾಜ್, ಸದಾಶಿವ ಸಾಲ್ಯಾನ್, ಸುಂದರ ಮೂಡಬಿದ್ರೆ, ಭವಾನಿ ಶಂಕರ್ ಶೆಟ್ಟಿ, ಮೋಹನ್ ಮಾರ್ನಾಡ್, ಗುಣಪಾಲ್ ಉಡುಪಿ, ಡಾ. ಸುರೇಂದ್ರ ಕುಮಾರ್ ಹೆಗ್ಡೆ, ರಮೇಶ್ ಕರ್ಕೇರಾ, ಉಮೇಶ್ ಶೆಟ್ಟಿ, ಅಶೋಕ್ ಕುಮಾರ್ ಕಾರ್ನಾಡ್, ಕುಂದರೇಗೆ, ಅನಸೂಯಾ, ಹೆಲೆನ್ ಮೊಂಟೆರೋ, ಸರೋಜಾದೇವಿ, ಚಂದ್ರಾವತಿ ದೇವಾಡಿಗ, ಜೂಲಿಯೆಟ್ ಪಿರೇರಾ ಸೇರಿದಂತೆ ಅನೇಕ ಹಿರಿಯ ಕಲಾವಿದರೊಂದಿಗೆ ಅವರು ಅಭಿನಯಿಸಿದ್ದರು.

ರಂಗಭೂಮಿಯ ಮೇಲಿನ ಅಪಾರ ಪ್ರೀತಿ, ಕಲೆಯ ಮೇಲಿನ ಬದ್ಧತೆ, ಅಭಿನಯದಲ್ಲಿನ ಸಹಜತೆ ಹಾಗೂ ಸಹ ನಟರೊಂದಿಗೆ ಹೊಂದಿದ್ದ ಆತ್ಮೀಯತೆ ಚಂದ್ರಪ್ರಭಾ ಅವರ ವ್ಯಕ್ತಿತ್ವದ ವಿಶೇಷತೆಗಳಾಗಿದ್ದವು. ಅವರ ಅಭಿನಯ ಮತ್ತು ಕಲಾ ಸೇವೆ ರಂಗಭೂಮಿಯ ಅಭಿಮಾನಿಗಳ ಮನದಲ್ಲಿ ಸದಾ ನೆನಪಾಗಿ ಉಳಿಯಲಿದೆ.

ಆಗಸ್ಟ್ 25ರಂದು ಅವರ ಅಕಾಲಿಕ ಅಗಲಿಕೆ ತುಳು-ಕನ್ನಡ ರಂಗಭೂಮಿ, ಕಲಾ ಸಂಸ್ಥೆಗಳು ಹಾಗೂ ಅಪಾರ ಸಂಖ್ಯೆಯ ಪ್ರೇಕ್ಷಕರಿಗೆ ತುಂಬಲಾರದ ನಷ್ಟವಾಗಿದೆ. ಅವರ ಪವಿತ್ರ ಆತ್ಮಕ್ಕೆ ಪರಮಾತ್ಮನು ಚಿರಶಾಂತಿ ಹಾಗೂ ಸದ್ಗತಿಯನ್ನು ಕರುಣಿಸಲಿ. ಅವರ ಮಕ್ಕಳು ಹಾಗೂ ಕುಟುಂಬಸ್ಥರಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಶ್ರೀದೇವರು ನೀಡಲಿ ಎಂದು ಮುಂಬಯಿಯ ಕಲಾವಿದರು, ಪ್ರೇಕ್ಷಕರು ಹಾಗೂ ವಿವಿಧ ಕಲಾ ಸಂಸ್ಥೆಗಳ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.