ಸಮಾಜಸೇವಕ ಸತೀಶ್ ಸಾಲ್ಯಾನ್ ಅವರಿಗೆ ಆತ್ಮೀಯ ಸ್ವಾಗತ
ಕರ್ನಾಟಕದ ರಕ್ತದಾನ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಸಮಾಜಸೇವಕ ಹಾಗೂ ರಕ್ತದಾನ ಪ್ರೇರಕ ಶ್ರೀ ಸತೀಶ್ ಸಾಲ್ಯಾನ್, ಉಡುಪಿ ಅವರು ಮಸ್ಕತ್‌ಗೆ ಆಗಮಿಸಿದ ಸಂದರ್ಭದಲ್ಲಿ ಮಸ್ಕತ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು.

ಮಸ್ಕತ್, ಅಕ್ಟೋಬರ್ 1, 2026: ಕರ್ನಾಟಕದ ರಕ್ತದಾನ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಸಮಾಜಸೇವಕ ಹಾಗೂ ರಕ್ತದಾನ ಪ್ರೇರಕ ಶ್ರೀ ಸತೀಶ್ ಸಾಲ್ಯಾನ್, ಉಡುಪಿ ಅವರು ಮಸ್ಕತ್‌ಗೆ ಆಗಮಿಸಿದ ಸಂದರ್ಭದಲ್ಲಿ ಮಸ್ಕತ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಕರ್ನಾಟಕ ಜಾನಪದ ಪರಿಷತ್ತು–ಮಸ್ಕತ್, ಓಮಾನ್ ಘಟಕದ ಅಧ್ಯಕ್ಷ ಕಟಪಾಡಿ ಶಿವಾನಂದ ಕೋಟ್ಯನ್ ಅವರ ನೇತೃತ್ವದಲ್ಲಿ ಸದಸ್ಯರಾದ ಶತೀಶ್ ಬಾರ್ಕೂರು, ಇಮ್ಯಾನುಯೆಲ್ ದಿವಾಕರ್, ಮಸ್ಕತ್ ಮೂಗವೀರಸ್ ಅಧ್ಯಕ್ಷ ಪದ್ಮಾಕರ ಮೆಂಡನ್ ಹಾಗೂ ಸದಸ್ಯರಾದ ಶೇಷಾ ಕಾಂಚನ್ ಮತ್ತು ದಿನಕರ್ ಸುವರ್ಣ ಕೋಟೆ ಅವರು ಸತೀಶ್ ಸಾಲ್ಯಾನ್ ಅವರನ್ನು ಬರಮಾಡಿಕೊಂಡರು.

ಅಕ್ಟೋಬರ್ 2ರಂದು ಮಸ್ಕತ್‌ನ ಘಾಲಾ ಹೆಲ್ತ್ ಸೆಂಟರ್‌ನಲ್ಲಿ ನಡೆಯಲಿರುವ 10ನೇ ವರ್ಷದ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರ ‘ಜೀವಧಾರೆ’ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಲು ಸತೀಶ್ ಸಾಲ್ಯಾನ್ ಮಸ್ಕತ್‌ಗೆ ಆಗಮಿಸಿದ್ದಾರೆ.
ಸ್ವತಃ 53 ಬಾರಿ ರಕ್ತದಾನ ಮಾಡಿರುವ ಅವರು, ಉಡುಪಿ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ತುರ್ತು ಸಂದರ್ಭಗಳಲ್ಲಿ ರಕ್ತದ ವ್ಯವಸ್ಥೆ, ಸ್ವಯಂಪ್ರೇರಿತ ರಕ್ತದಾನ ಶಿಬಿರಗಳ ಆಯೋಜನೆ, ರಕ್ತದಾನಿಗಳ ಸಂಪರ್ಕ ಹಾಗೂ ರಕ್ತದಾನದ ಕುರಿತು ಜನಜಾಗೃತಿ ಮೂಡಿಸುವ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅಗತ್ಯವಿರುವ ರೋಗಿಗಳಿಗೆ ಸಕಾಲದಲ್ಲಿ ರಕ್ತ ದೊರಕಿಸಿಕೊಡುವುದರ ಜೊತೆಗೆ, ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ನೆರವು ನೀಡುವ ಮಾನವೀಯ ಸೇವೆಯಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ.

ಕಡಲಾಚೆಯ ಕನ್ನಡಿಗರು ಆಯೋಜಿಸಿರುವ ರಕ್ತದಾನ ಸೇವಾ ಕಾರ್ಯದಲ್ಲಿ ಪಾಲ್ಗೊಳ್ಳಲು ಕರ್ನಾಟಕದಿಂದ ಆಗಮಿಸಿರುವ ಸತೀಶ್ ಸಾಲ್ಯಾನ್ ಅವರ ಉಪಸ್ಥಿತಿಯು ಓಮಾನ್‌ನ ಸ್ವಯಂಪ್ರೇರಿತ ರಕ್ತದಾನ ಚಳವಳಿಗೆ ಮತ್ತಷ್ಟು ಪ್ರೇರಣೆ ನೀಡಲಿದೆ ಎಂದು ಆಯೋಜಕ ಕಟಪಾಡಿ ಶಿವಾನಂದ ಕೋಟ್ಯನ್ ಹೇಳಿದರು.
ಅಕ್ಟೋಬರ್ 2ರಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ಘಾಲಾ ಹೆಲ್ತ್ ಸೆಂಟರ್‌ನಲ್ಲಿ ನಡೆಯಲಿರುವ ‘ಜೀವಧಾರೆ’ ಶಿಬಿರದಲ್ಲಿ ಓಮಾನ್‌ನ ವಿವಿಧ ಭಾಗಗಳಿಂದ ರಕ್ತದಾನಿಗಳು, ವೈದ್ಯರು, ಸಮಾಜಸೇವಕರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಕಳೆದ ಒಂದು ದಶಕದ ರಕ್ತದಾನ ಸೇವಾ ಪಯಣ ಹಾಗೂ ರಕ್ತದಾನದ ಮಹತ್ವವನ್ನು ದಾಖಲಿಸುವ ವಿಶೇಷ ಮಾಹಿತಿ ಪುಸ್ತಕ ‘ಜೀವಧಾರೆ – The Ray of Life’ ಅನ್ನು ಅನಾವರಣಗೊಳಿಸಲಾಗುವುದು.

“ರಕ್ತದಾನದಿಂದ ಜೀವದಾನ, ಸೇವೆಯಿಂದ ಮಾನವೀಯತೆಯ ಸಂದೇಶ” ಎಂಬ ಆಶಯದೊಂದಿಗೆ ನಡೆಯುತ್ತಿರುವ ‘ಜೀವಧಾರೆ’ ಕಾರ್ಯಕ್ರಮಕ್ಕೆ ಆಗಮಿಸಿರುವ ಸತೀಶ್ ಸಾಲ್ಯಾನ್ ಅವರಿಗೆ ಮಸ್ಕತ್‌ನಲ್ಲಿ ಆತ್ಮೀಯ ಸ್ವಾಗತ ದೊರೆಯಿತು.
