ದೊಡ್ಡ ದುರಂತ ತಪ್ಪಿಸಿದ ಬಂಟ್ವಾಳ ತಾಲೂಕಿನ ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಮನ್ವಿತ್
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಮನ್ವಿತ್ ತನ್ನ ಸಮಯಪ್ರಜ್ಞೆ, ಧೈರ್ಯ ಮತ್ತು ಮಾನವೀಯ ಕಾಳಜಿಯಿಂದ ಸಂಭವಿಸಬಹುದಾಗಿದ್ದ ದೊಡ್ಡ ದುರಂತವೊಂದನ್ನು...

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಮನ್ವಿತ್ ತನ್ನ ಸಮಯಪ್ರಜ್ಞೆ, ಧೈರ್ಯ ಮತ್ತು ಮಾನವೀಯ ಕಾಳಜಿಯಿಂದ ಸಂಭವಿಸಬಹುದಾಗಿದ್ದ ದೊಡ್ಡ ದುರಂತವೊಂದನ್ನು ತಪ್ಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಶಾಲೆಯ ಅಡುಗೆ ಮನೆಯಲ್ಲಿ ಅಡುಗೆ ಸಿಬ್ಬಂದಿಯೊಬ್ಬರ ಕೈಬೆರಳು ಯಂತ್ರದಲ್ಲಿ ಸಿಲುಕಿಕೊಂಡು ನೋವಿನಿಂದ ಕಿರುಚಿಕೊಂಡ ಸಂದರ್ಭದಲ್ಲಿ, ಪರಿಸ್ಥಿತಿಯ ಗಂಭೀರತೆಯನ್ನು ಕ್ಷಣಮಾತ್ರದಲ್ಲಿ ಅರಿತುಕೊಂಡ ಮನ್ವಿತ್ ಎದೆಗುಂದದೆ ಕೂಡಲೇ ಅಡುಗೆ ಮನೆಗೆ ಧಾವಿಸಿದ್ದಾನೆ. ಬಳಿಕ ವಿದ್ಯುತ್ ಸಂಪರ್ಕದ ಸ್ವಿಚ್‌ನ್ನು ಆಫ್ ಮಾಡಿ ಹೆಚ್ಚಿನ ಅಪಾಯ ಸಂಭವಿಸುವುದನ್ನು ತಡೆಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾನೆ.
ಪುಟ್ಟ ವಯಸ್ಸಿನಲ್ಲೇ ಮನ್ವಿತ್ ತೋರಿದ ಈ ಸಮಯಪ್ರಜ್ಞೆ ಮತ್ತು ಧೈರ್ಯದಿಂದ ಅಡುಗೆ ಸಿಬ್ಬಂದಿಯ ಕೈಗೆ ಮತ್ತಷ್ಟು ಗಂಭೀರ ಗಾಯವಾಗುವುದನ್ನು, ಬಹುಶಃ ದೊಡ್ಡ ದುರಂತವನ್ನೇ ತಪ್ಪಿಸಿದಂತಾಗಿದೆ.
ಸಂಕಷ್ಟದ ಸಂದರ್ಭದಲ್ಲಿ ಗಾಬರಿಯಾಗದೆ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ತಕ್ಷಣ ಕ್ರಮ ಕೈಗೊಂಡ ಮನ್ವಿತ್‌ನ ಜಾಣ್ಮೆ ಇದೀಗ ಶಾಲಾ ಶಿಕ್ಷಕರು, ಪೋಷಕರು ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಅಕ್ಷರ, ಆಟ, ಪಾಠ ಮತ್ತು ಗೆಳೆಯರೊಂದಿಗೆ ನಗುವಿನ ನಡುವೆ ಬೆಳೆಯುತ್ತಿರುವ ಪುಟ್ಟ ಮನ್ವಿತ್, ಆ ಕ್ಷಣದಲ್ಲಿ ತೋರಿದ ಮಾನವೀಯ ಕಾಳಜಿ ಮತ್ತು ಧೈರ್ಯದಿಂದ ಎಲ್ಲರಿಗೂ ಮಾದರಿಯಾಗಿದ್ದಾನೆ. ಆತನ ಸಮಯಪ್ರಜ್ಞೆ ಹಾಗೂ ಸಾಹಸಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
