ಸಮಾಜದಲ್ಲಿ ಯುವ ಪ್ರತಿಭೆಗಳನ್ನು ಮುಖ್ಯವಾಹಿನಿಗೆ ತರುವ ಯುವವಾಹಿನಿಯ ಪ್ರಯತ್ನ ಶ್ಲಾಘನೀಯ: ಜೀವನ್ ಕೊಲ್ಯ
ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಸೆಪ್ಟೆಂಬರ್ 16ರಂದು ನಡೆದ ಸಾಪ್ತಾಹಿಕ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ವ್ಯಕ್ತಿತ್ವ ವಿಕಸನದ ಕುರಿತು ಉಪನ್ಯಾಸ ನೀಡಿದರು.

ಮಂಗಳೂರು: ಸಮಾಜದ ಯುವ ಸದಸ್ಯರಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಮುಖ್ಯವಾಹಿನಿಗೆ ತರುವ ಯುವವಾಹಿನಿ ಸಂಸ್ಥೆಯ ಪ್ರಯತ್ನ ಶ್ಲಾಘನೀಯ ಎಂದು ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲದ ವ್ಯವಸ್ಥಾಪಕರು ಹಾಗೂ ಮುಖ್ಯ ತರಬೇತುದಾರರು, ಯುವವಾಹಿನಿ (ರಿ.) ಕೊಲ್ಯ ಘಟಕದ ಅಧ್ಯಕ್ಷರಾದ ಜೀವನ್ ಕೊಲ್ಯ ಹೇಳಿದರು.
ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಸೆಪ್ಟೆಂಬರ್ 16ರಂದು ನಡೆದ ಸಾಪ್ತಾಹಿಕ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ವ್ಯಕ್ತಿತ್ವ ವಿಕಸನದ ಕುರಿತು ಉಪನ್ಯಾಸ ನೀಡಿದರು.

ಇಂದಿನ ದಿನಗಳಲ್ಲಿ ಯುವಕರಿಗೆ ತಮ್ಮ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಪ್ರದರ್ಶಿಸಲು ಹಲವಾರು ಅವಕಾಶಗಳು ದೊರೆಯುತ್ತಿವೆ. ಇತರ ಸಂಘ-ಸಂಸ್ಥೆಗಳಿಗೆ ಹೋಲಿಸಿದರೆ ಯುವವಾಹಿನಿ ಯುವಕರಿಗಾಗಿ ಉತ್ತಮ ವೇದಿಕೆಯನ್ನು ನಿರ್ಮಿಸುತ್ತಿದೆ. ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳಲ್ಲಿ ಕೇವಲ ಉಪನ್ಯಾಸಕ್ಕೆ ಸೀಮಿತವಾಗದೆ, ಪರಸ್ಪರ ಸಂಭಾಷಣೆ ಹಾಗೂ ಚಟುವಟಿಕೆಗಳ ಮೂಲಕ ವ್ಯಕ್ತಿಯೊಳಗೆ ಅಡಗಿರುವ ಪ್ರತಿಭೆ ಮತ್ತು ಕೌಶಲ್ಯಗಳನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದರು.

ಇಂತಹ ಕಾರ್ಯಕ್ರಮಗಳ ಮೂಲಕ ಯುವಕರು ವೇದಿಕೆಯ ಭಯವನ್ನು ತೊರೆದು ಆತ್ಮವಿಶ್ವಾಸದಿಂದ ಮುಂದೆ ಬರಲು ಸಾಧ್ಯವಾಗುತ್ತದೆ. ಯುವವಾಹಿನಿಯ ಸಭೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಸದಸ್ಯರು ಭಾಗವಹಿಸುವಂತೆ ವಿವಿಧ ರೀತಿಯ ಸ್ಪರ್ಧೆಗಳು ಹಾಗೂ ಆಸಕ್ತಿದಾಯಕ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಸದಸ್ಯರಲ್ಲಿ ಸಭೆಯತ್ತ ಆಸಕ್ತಿ ಮೂಡಿಸುವ ಪ್ರಯತ್ನ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಹರೀಶ್ ಕೆ. ಸುವರ್ಣ ಅವರ ಅಧ್ಯಕ್ಷತೆಯಲ್ಲಿ ಗುರುಪ್ರಾರ್ಥನೆಯೊಂದಿಗೆ ಸಾಪ್ತಾಹಿಕ ಸಭೆ ಆರಂಭವಾಯಿತು. ಅಧ್ಯಕ್ಷರು ಸರ್ವ ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಜೀವನ್ ಕೊಲ್ಯ ಅವರನ್ನು ಮಂಗಳೂರು ಘಟಕದ ಪರವಾಗಿ ಮಾಜಿ ಅಧ್ಯಕ್ಷರಾದ ನವೀನ್ ಚಂದ್ರ ಪೂಜಾರಿ ಅವರು ಹೂ ನೀಡಿ ಸ್ವಾಗತಿಸಿದರು.
ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ಶ್ರೀಕಾಂತ್ ಅಂಚನ್ ಗುರುಸಂದೇಶ ನೀಡಿದರು. ಕಾರ್ಯದರ್ಶಿ ಕುಮಾರಿ ಉಷಾ. ಕೆ. ವರದಿ ವಾಚಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯ ಸದಸ್ಯರು ಉಪಸ್ಥಿತರಿದ್ದರು.
ಕೋಶಾಧಿಕಾರಿ ಚಂದ್ರಶೇಖರ್ ಕಿನ್ನಿಗೋಳಿ ವಂದಿಸಿದರು. ಲೋಕಕಲ್ಯಾಣ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
