ವಿಶು ವಿಹಂಗಮ–ವಿಶು ಕಾವ್ಯಾಮೃತ ಸ್ಪರ್ಧೆಗಳ ಫಲಿತಾಂಶ ಪ್ರಕಟ: ಪೂರ್ಣಿಮಾ ಕೋಟ್ಯಾನ್‌ಗೆ ಪ್ರಥಮ, ರಶ್ಮಿ ಸನಿಲ್ ದ್ವಿತೀಯ ಸ್ಥಾನ
ಮಂಗಳೂರು: ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಯುವವಾಹಿನಿ ಉಡುಪಿ ಘಟಕದ ಆತಿಥ್ಯ ಹಾಗೂ ವಿಶುಕುಮಾರ್ ದತ್ತಿನಿಧಿ ಸಮಿತಿಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಆನ್‌ಲೈನ್ ‘ವಿಶು ವಿಹಂಗಮ’ ಕೃತಿ ವಿಮರ್ಶೆ ಮತ್ತು ‘ವಿಶು ಕಾವ್ಯಾಮೃತ’ ಕವನ ಸ್ಪರ್ಧೆಗಳ ಫಲಿತಾಂಶ ಪ್ರಕಟಗೊಂಡಿದೆ.

ಮಂಗಳೂರು: ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಯುವವಾಹಿನಿ ಉಡುಪಿ ಘಟಕದ ಆತಿಥ್ಯ ಹಾಗೂ ವಿಶುಕುಮಾರ್ ದತ್ತಿನಿಧಿ ಸಮಿತಿಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಆನ್‌ಲೈನ್ ‘ವಿಶು ವಿಹಂಗಮ’ ಕೃತಿ ವಿಮರ್ಶೆ ಮತ್ತು ‘ವಿಶು ಕಾವ್ಯಾಮೃತ’ ಕವನ ಸ್ಪರ್ಧೆಗಳ ಫಲಿತಾಂಶ ಪ್ರಕಟಗೊಂಡಿದೆ.

ಸಾಹಿತಿ ವಿಶುಕುಮಾರ್ ಅವರ ಸಾಹಿತ್ಯ ಕೃತಿಗಳನ್ನು ಯುವ ಬರಹಗಾರರಿಗೆ ಪರಿಚಯಿಸುವ ಹಾಗೂ ಕನ್ನಡ ಸಾಹಿತ್ಯಾಸಕ್ತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಕವನ ಸ್ಪರ್ಧೆಯಲ್ಲಿ 106 ಮಂದಿ ಹಾಗೂ ಕೃತಿ ವಿಮರ್ಶೆ ಸ್ಪರ್ಧೆಯಲ್ಲಿ 25 ಮಂದಿ ಭಾಗವಹಿಸಿದ್ದರು.
‘ವಿಶು ವಿಹಂಗಮ’ ಕೃತಿ ವಿಮರ್ಶೆ ಸ್ಪರ್ಧೆಯಲ್ಲಿ ಡಾ. ಮೈತ್ರಿ ಭಟ್ ವಿಟ್ಲ ಪ್ರಥಮ, ರಶ್ಮಿ ಸನಿಲ್ ಮಂಗಳೂರು ದ್ವಿತೀಯ ಹಾಗೂ ಚೈತ್ರ ಕಬ್ಬಿನಾಲೆ ಕಾರ್ಕಳ ತೃತೀಯ ಸ್ಥಾನ ಪಡೆದಿದ್ದಾರೆ.
‘ವಿಶು ಕಾವ್ಯಾಮೃತ’ ಕವನ ಸ್ಪರ್ಧೆಯಲ್ಲಿ ಪೂರ್ಣಿಮಾ ಕೋಟ್ಯಾನ್ ಮಾರ್ನಾಡು ಮೂಡುಬಿದಿರೆ ಪ್ರಥಮ, ರಶ್ಮಿ ಸನಿಲ್ ಮಂಗಳೂರು ದ್ವಿತೀಯ ಹಾಗೂ ಎಸ್.ವಿ. ಶಾಂತಕುಮಾರ ಪಲ್ಲಾಗಟ್ಟಿ ಜಗಳೂರು ತೃತೀಯ ಸ್ಥಾನ ಗಳಿಸಿದ್ದಾರೆ.
ಎರಡೂ ಸ್ಪರ್ಧೆಗಳಲ್ಲಿ ಹಲವು ಮಂದಿ ಮೆಚ್ಚುಗೆ ಬಹುಮಾನಕ್ಕೂ ಆಯ್ಕೆಯಾಗಿದ್ದಾರೆ. ಕೃತಿ ವಿಮರ್ಶೆ ಸ್ಪರ್ಧೆಗೆ ಹಿರಿಯ ಸಾಹಿತಿಗಳಾದ ಮುದ್ದು ಮೂಡುಬೆಳ್ಳೆ ಮತ್ತು ಮೀನಾಕ್ಷಿ ರಾಮಚಂದ್ರ ತೀರ್ಪುಗಾರರಾಗಿದ್ದು, ಕವನ ಸ್ಪರ್ಧೆಗೆ ರತ್ನಾ ಕೆ. ಭಟ್ ತಲಂಜೇರಿ ಹಾಗೂ ಅಮಿತಾಂಜಲಿ ಕಿರಣ್ ತೀರ್ಪುಗಾರರಾಗಿ ಸಹಕರಿಸಿದ್ದಾರೆ.
ಸ್ಪರ್ಧೆಯ ಸಂಚಾಲಕರಾಗಿ ಲತೀಶ್ ಎಂ. ಸಂಕೊಳಿಗೆ ಕಾರ್ಯನಿರ್ವಹಿಸಿದ್ದು, ವಿಶುಕುಮಾರ್ ದತ್ತಿನಿಧಿ ಸಮಿತಿಯ ಸಂಚಾಲಕ ಜಗದೀಶ್ ಕುಮಾರ್ ಹಾಗೂ ಸದಸ್ಯ ದಯಾನಂದ ಕರ್ಕೇರ ಉಗ್ಗೆಲ್‌ಬೆಟ್ಟು ಸಹಕರಿಸಿದ್ದಾರೆ.
ವಿಶುಕುಮಾರ್ ಅವರ ಸಾಹಿತ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದರೊಂದಿಗೆ ಕನ್ನಡ ಸಾಹಿತ್ಯಾಭಿರುಚಿ ಮತ್ತು ಸೃಜನಶೀಲ ಬರವಣಿಗೆಯನ್ನು ಉತ್ತೇಜಿಸುವಲ್ಲಿ ಈ ಸ್ಪರ್ಧೆಗಳು ಮಹತ್ವದ ಪಾತ್ರ ವಹಿಸಿವೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ತಿಳಿಸಿದ್ದಾರೆ.
