Skip to content
Billava News

ಯುವವಾಹಿನಿ (ರಿ). ಬೆಳ್ತಂಗಡಿ: "ಗುರು ಚಿಂತನ" ಕಾರ್ಯಕ್ರಮದ ಅಂಗವಾಗಿ ತಾಲೂಕು ಮಟ್ಟದ ಮುಕ್ತ ಭಾಷಣ ಮತ್ತು ಕವನ ಸ್ಪರ್ಧೆ

ಬೆಳ್ತಂಗಡಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಬೆಳ್ತಂಗಡಿ ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿಯ ಪ್ರಯುಕ್ತ "ಗುರು ಚಿಂತನ" ಕಾರ್ಯಕ್ರಮದ ಅಂಗವಾಗಿ ತಾಲೂಕು ಮಟ್ಟದ ಮುಕ್ತ ಭಾಷಣ ಮತ್ತು ಕವನ ಸ್ಪರ್ಧೆಯು ಅ.2 ರಂದು ಗುರುವಾರ ಬೆಳ್ತಂಗಡಿಯ ಮುಳಿಯ ಜ್ಯುವೆಲ್ಲರ್ಸ್ ಸಭಾಭವನದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.

By Billavavani
ಯುವವಾಹಿನಿ (ರಿ). ಬೆಳ್ತಂಗಡಿ: "ಗುರು ಚಿಂತನ" ಕಾರ್ಯಕ್ರಮದ ಅಂಗವಾಗಿ ತಾಲೂಕು ಮಟ್ಟದ ಮುಕ್ತ ಭಾಷಣ ಮತ್ತು ಕವನ ಸ್ಪರ್ಧೆ

ಬೆಳ್ತಂಗಡಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಬೆಳ್ತಂಗಡಿ ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿಯ ಪ್ರಯುಕ್ತ "ಗುರು ಚಿಂತನ" ಕಾರ್ಯಕ್ರಮದ ಅಂಗವಾಗಿ ತಾಲೂಕು ಮಟ್ಟದ ಮುಕ್ತ ಭಾಷಣ ಮತ್ತು ಕವನ ಸ್ಪರ್ಧೆಯು ಅ.2 ರಂದು ಗುರುವಾರ ಬೆಳ್ತಂಗಡಿಯ ಮುಳಿಯ ಜ್ಯುವೆಲ್ಲರ್ಸ್ ಸಭಾಭವನದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.

ಬೆಳಿಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ಕೀರ್ತನಾ ಕಲಾ ತಂಡ ಮುಂಡಾಜೆ ಇದರ ಅಧ್ಯಕ್ಷರಾದ ಖ್ಯಾತ ಕೀರ್ತನಕಾರ ಸದಾನಂದ ಬಿ. ಮುಂಡಾಜೆ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭ ಕೋರಿದರು. ಅವರು ಮಾತನಾಡಿ ಯುವವಾಹಿನಿ ಸಂಘಟನೆ ಸಮಾಜಮುಖಿ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ, ಇಂತಹ ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಗುರು ಚಿಂತನೆಗಳನ್ನು ಬಿತ್ತುವ ಕೆಲಸ ಶ್ಲಾಘನೀಯ ಎಂದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷೆ ಲೀಲಾವತಿ ವಸಂತ ಪೂಜಾರಿ ಅವರು ವಹಿಸಿದ್ದರು. ಅವರು ಮಾತನಾಡಿ "ನಮ್ಮ ಕರೆಗೆ ಓಗೊಟ್ಟು ತಾಲೂಕಿನ ವಿವಿಧೆಡೆಯಿಂದ ಬಂದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಧನ್ಯವಾದಗಳು. ವೇದಿಕೆಯಲ್ಲಿ ನಿಮ್ಮ ಅನಿಸಿಕೆಯನ್ನು ಅತ್ಯಂತ ಅರ್ಥಪೂರ್ಣವಾಗಿ ವ್ಯಕ್ತಪಡಿಸಿದ್ದೀರಿ. ಸೋಲು-ಗೆಲುವು ಇದ್ದದ್ದೇ, ಇದನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳದೆ, ಮುಂದಿನ ದಿನಗಳಲ್ಲಿ ಇನ್ನೂ ಎತ್ತರಕ್ಕೆ ಬೆಳೆಯುವಂತಾಗಲಿ" ಎಂದು ಹಾರೈಸಿದರು.

WhatsApp Image 2026-10-06 at 12.31.50 PM (1).jpeg

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯ ಪ್ರಾಂಶುಪಾಲರಾದ ಡಾ. ಸವಿತಾ ಅವರು ಮಾತನಾಡಿ "ಇಂದು ಹಲವಾರು ಸಂಘ ಸಂಸ್ಥೆಗಳು ಗುರುಗಳ ತತ್ವವನ್ನು ಪ್ರಚಾರ ಮಾಡುವ ಪ್ರಯತ್ನ ಮಾಡುತ್ತಿವೆ. ಈ ವೇದಿಕೆಯಲ್ಲಿ ವಿದ್ಯಾರ್ಥಿಗಳು ನಾರಾಯಣ ಗುರುಗಳ ಸಂದೇಶವನ್ನು ಒಳ್ಳೆಯ ರೀತಿಯಲ್ಲಿ ಇತರರಿಗೆ ತಿಳಿಸಿದ್ದಾರೆ. ಮಹಾತ್ಮ ಗಾಂಧೀಜಿ ಮತ್ತು ನಾರಾಯಣ ಗುರುಗಳ ಚಿಂತನೆಗಳು ಒಂದೇ ದಿಕ್ಕಿನಲ್ಲಿವೆ. ಗುರುಗಳ 'ವಿದ್ಯೆಯಿಂದ ಸ್ವತಂತ್ರರಾಗಿ' ಎಂಬ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಶಿಕ್ಷಣಕ್ಕೆ ನೀಡಬೇಕು, ಇದರಿಂದ ದೇಶವನ್ನು ಅಭಿವೃದ್ಧಿಪಡಿಸಲು ಸಾಧ್ಯ" ಎಂದರು.

ಯುವವಾಹಿನಿ ಘಟಕದ ನಿಕಟಪೂರ್ವ ಅಧ್ಯಕ್ಷರಾದ ಗುರುರಾಜ್ ಗುರಿಪಳ್ಳ ಅವರು ಮಾತನಾಡಿ "ಯುವವಾಹಿನಿ ಬೆಳ್ತಂಗಡಿ ಘಟಕ ಮಾದರಿ ಕಾರ್ಯಕ್ರಮವನ್ನು ನಡೆಸಿದೆ. ನಾರಾಯಣ ಗುರುಗಳ ಚಿಂತನೆಯನ್ನು ಎಲ್ಲಾ ಕಡೆಯಲ್ಲಿಯೂ ಮಕ್ಕಳು ತಿಳಿಸಬೇಕು. ಗುರುಗಳು ಹೋರಾಡಿದ ಅಸ್ಪೃಶ್ಯತೆಯನ್ನು ಬೇರು ಸಮೇತ ಕಿತ್ತೆಸೆಯಬೇಕು. ದೇಶ ವಿದೇಶಗಳಲ್ಲಿ ಗುರುಗಳ ಸಂದೇಶವನ್ನು ಬಿತ್ತರಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು, ಗುರುಗಳ ಚಿಂತನೆಯಂತೆ ಬದುಕಬೇಕು" ಎಂದು ಕರೆ ನೀಡಿದರು.

WhatsApp Image 2026-10-06 at 12.31.51 PM.jpeg

ವೇದಿಕೆಯಲ್ಲಿ ಮುಳಿಯ ಜ್ಯುವೆಲ್ಲರ್ಸ್ ಬೆಳ್ತಂಗಡಿ ಶಾಖಾ ಉಪ ವ್ಯವಸ್ಥಾಪಕ ಸುಧೀರ್ ಕುಮಾರ್, ಸಪ್ತಗಿರಿ ಎಲೆಕ್ಟ್ರಾನಿಕ್ಸ್ ಮಾಲಕ ನಿತ್ಯಾನಂದ, ಯುವ ವಾಹಿನಿ ನಿರ್ದೇಶಕ ಯಶೋಧರ ಮುಂಡಾಜೆ, ಪ್ರಧಾನ ಕಾರ್ಯದರ್ಶಿ ಅಶ್ವಿನ್ ಬಿ.ಕೆ., ಕೋಶಾಧಿಕಾರಿ ಸುಧೀಪ್ ಸವಣಾಲು, ಪೂರ್ವಾಧ್ಯಕ್ಷರಾದ ರಾಕೇಶ್ ಪೂಜಾರಿ ಮೂಡುಕೋಡಿ, ಅಶ್ವತ್ ಕುಮಾರ್, ಜೆಸಿಐ ಬೆಳ್ತಂಗಡಿ ಮಂಜುಶ್ರೀ ಘಟಕದ ಅಧ್ಯಕ್ಷ ಜಿತೇಶ್ ಮೊದಲಾದವರು ಉಪಸ್ಥಿತರಿದ್ದರು.

ತಾಲೂಕು ಮಟ್ಟದ ಈ ಸ್ಪರ್ಧೆಯಲ್ಲಿ ಒಟ್ಟು 47 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕವನ ಸ್ಪರ್ಧೆಯಲ್ಲಿ 14 ಮಂದಿ, ಪ್ರೌಢಶಾಲಾ ವಿಭಾಗದ ಮುಕ್ತ ಭಾಷಣ ಸ್ಪರ್ಧೆಯಲ್ಲಿ 14 ಮಂದಿ ಮತ್ತು ಕಾಲೇಜು ವಿಭಾಗದ ಮುಕ್ತ ಭಾಷಣ ಸ್ಪರ್ಧೆಯಲ್ಲಿ 21 ಮಂದಿ ಸ್ಪರ್ಧಿಗಳು ತಮ್ಮ ವಾಕ್ ಚಾತುರ್ಯದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶಗಳ ಬಗ್ಗೆ ಮಾತನಾಡಿ ಪ್ರತಿಭೆಯನ್ನು ಪ್ರದರ್ಶಿಸಿದರು. ತಾಲೂಕಿನ ವಿವಿಧ ಶಾಲಾ-ಕಾಲೇಜುಗಳಿಂದ ಅನೇಕ ವಿದ್ಯಾರ್ಥಿಗಳು ಪ್ರೇಕ್ಷಕರಾಗಿ ಆಗಮಿಸಿದ್ದರು.

ತೀರ್ಪುಗಾರರಾಗಿ ಯುವವಾಹಿನಿ ಘಟಕದ ಮಾಜಿ ಅಧ್ಯಕ್ಷ ಎಂ.ಕೆ. ಪ್ರಸಾದ್, ಗುರುದೇವ ಸಹಕಾರಿ ಬ್ಯಾಂಕ್ ಸಿಇಓ ಅಶ್ವಥ್ ಕುಮಾರ್, ಮುಖ್ಯ ಶಿಕ್ಷಕಿ ಸೇವಂತಿ ಹಾಗೂ ಸದಾನಂದ ಬಿ. ಮುಂಡಾಜೆ ಅವರು ಕಾರ್ಯ ನಿರ್ವಹಿಸಿದರು.

ಇದೇ ಸಂದರ್ಭದಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕದ ವತಿಯಿಂದ ಆಯೋಜಿಸಲಿರುವ ನಾರಾಯಣ ಗುರು ದರ್ಶನ ತುಳು ಯಕ್ಷಗಾನ ತಾಳಮದ್ದಳೆ ಯ ಪೋಸ್ಟರ್ ಬಿಡುಗಡೆ ಹಾಗೂ ಅ.04 ರಂದು ಮೂಡಬಿದ್ರೆಯ ಸ್ವರಾಜ್ ಮೈದಾನದಲ್ಲಿ ನಡೆಯಲಿರುವ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವವಾಹಿನಿ ಕ್ರೀಡಾಕೂಟದ *ಟಿ-ಶರ್ಟ್ ಬಿಡುಗಡೆ ಯನ್ನು ಗಣ್ಯರ ಸಮ್ಮುಖದಲ್ಲಿ ನೆರವೇರಿಸಲಾಯಿತು.

ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಮರಣಿಕೆ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಪ್ರಧಾನ ಕಾರ್ಯದರ್ಶಿ ಅಶ್ವಿನ್ ಬಿ.ಕೆ. ಸ್ವಾಗತಿಸಿ, ಕೋಶಾಧಿಕಾರಿ ಸುಧೀಪ್ ಸವಣಾಲು ವಂದಿಸಿದರು. ಕಾರ್ಯಕ್ರಮವನ್ನು ಸುಧಾಮಣಿ, ಶೈಲೇಶ್ ಮತ್ತು ಧನರಾಜ್ ಕುದ್ರಡ್ಕ ಅವರು ಅಚ್ಚುಕಟ್ಟಾಗಿ ನಿರೂಪಿಸಿದರು.