ಯುವವಾಹಿನಿ (ರಿ.) ಕೊಲ್ಯ ಘಟಕ: ವಿದ್ಯಾರ್ಥಿಗಳಿಗೆ ಡ್ರಗ್ಸ್ ಹಾಗೂ ಮೊಬೈಲ್ ವ್ಯಸನದ ದುಷ್ಪರಿಣಾಮಗಳ ಕುರಿತು ಮಾಹಿತಿ ಶಿಬಿರ
ಉಳ್ಳಾಲ: ಯುವವಾಹಿನಿ (ರಿ) ಕೊಲ್ಯ ಘಟಕ ಹಾಗೂ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇವರ ಜಂಟಿ ಆಶ್ರಯದಲ್ಲಿ ಪಾಂಡ್ಯರಾಜ್ ಬಲ್ಲಾಳ್ ಪದವಿ ಪೂರ್ವ ಕಾಲೇಜು, ಉಳ್ಳಾಲದ ವಿದ್ಯಾರ್ಥಿಗಳಿಗೆ ಡ್ರಗ್ಸ್ ಹಾಗೂ ಮೊಬೈಲ್ ವ್ಯಸನದ ದುಷ್ಪರಿಣಾಮಗಳ ಕುರಿತು ಮಾಹಿತಿ ಕಾರ್ಯಕ್ರಮವು ನವೆಂಬರ್ 11, 2026ರ ಬುಧವಾರದಂದು ನಡೆಯಿತು.

ಉಳ್ಳಾಲ: ಯುವವಾಹಿನಿ (ರಿ) ಕೊಲ್ಯ ಘಟಕ ಹಾಗೂ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇವರ ಜಂಟಿ ಆಶ್ರಯದಲ್ಲಿ ಪಾಂಡ್ಯರಾಜ್ ಬಲ್ಲಾಳ್ ಪದವಿ ಪೂರ್ವ ಕಾಲೇಜು, ಉಳ್ಳಾಲದ ವಿದ್ಯಾರ್ಥಿಗಳಿಗೆ ಡ್ರಗ್ಸ್ ಹಾಗೂ ಮೊಬೈಲ್ ವ್ಯಸನದ ದುಷ್ಪರಿಣಾಮಗಳ ಕುರಿತು ಮಾಹಿತಿ ಕಾರ್ಯಕ್ರಮವು ನವೆಂಬರ್ 11, 2026ರ ಬುಧವಾರದಂದು ನಡೆಯಿತು.
ಕಾರ್ಯಕ್ರಮದಲ್ಲಿ ಕೊಲ್ಯ ಘಟಕದ ಅಧ್ಯಕ್ಷರಾದ ಜೀವನ್ ಕೊಲ್ಯ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಹಾಗೂ ಮಾದಕವಸ್ತು ವ್ಯಸನದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವನ್ನು ವಿವರಿಸಿದರು. ಮೊಬೈಲ್ ಬಳಕೆಯಲ್ಲಿ ವಿದ್ಯಾರ್ಥಿಗಳು ಅನುಸರಿಸಬೇಕಾದ ಮುನ್ನೆಚ್ಚರಿಕೆಗಳು, ಮಾದಕವಸ್ತುಗಳ ಜಾಲಕ್ಕೆ ಸಿಲುಕುವುದರಿಂದ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಗಳು ಎದುರಿಸುವ ನೋವು, ಸಾಮಾಜಿಕ ತಿರಸ್ಕಾರ ಮತ್ತು ಸಮಾಜದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸ್ಪರ್ಶ ಕೌನ್ಸೆಲಿಂಗ್ ಕೇಂದ್ರದ ಆಪ್ತ ಸಮಾಲೋಚಕಿ ಡಾ. ವಿದ್ಯಾ ಅವರು ಮೊಬೈಲ್ ಬಳಕೆಯಿಂದ ದೇಹ ಮತ್ತು ಮನಸ್ಸಿನ ಮೇಲೆ ಉಂಟಾಗುವ ದುಷ್ಪರಿಣಾಮಗಳು, ಮೊಬೈಲ್ನಿಂದ ದೂರವಿದ್ದು ಇತರ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ವಿಧಾನಗಳು ಹಾಗೂ ಡ್ರಗ್ಸ್ ವ್ಯಸನದ ಅಪಾಯಗಳ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಮಾದಕವಸ್ತುಗಳ ಜಾಲಕ್ಕೆ ಬಲಿಯಾಗದಂತೆ ವಹಿಸಬೇಕಾದ ಎಚ್ಚರಿಕೆಗಳು ಮತ್ತು ಈ ವ್ಯಸನಗಳಿಂದ ಕುಟುಂಬ ಹಾಗೂ ಸಮಾಜದ ಮೇಲೆ ಉಂಟಾಗುವ ಪರಿಣಾಮಗಳನ್ನು ವಿವರವಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಯೊಂದಿಗೆ ಮುಕ್ತವಾಗಿ ಸಂವಾದ ನಡೆಸಿ ತಮ್ಮಲ್ಲಿದ್ದ ಸಂದೇಹಗಳನ್ನು ನಿವಾರಿಸಿಕೊಂಡರು. ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸುಮಾರು 150 ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಮಾಹಿತಿ ಶಿಬಿರವು ಮೊಬೈಲ್ ಮತ್ತು ಮಾದಕವಸ್ತು ವ್ಯಸನಗಳ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವಲ್ಲಿ ಯಶಸ್ವಿಯಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಶರ್ಮಿಳಾ ಹಾಗೂ ಉಪಪ್ರಾಂಶುಪಾಲರಾದ ರಶ್ಮಿ ಚೌಟ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವವಾಹಿನಿ ಕೊಲ್ಯ ಘಟಕದ ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ಸವಿತಾ ಬಂಗೇರ ಕಾರ್ಯಕ್ರಮವನ್ನು ಸಂಯೋಜಿಸಿದರು.
