ಯುವವಾಹಿನಿ ಕೊಲ್ಯ ಘಟಕ: ವಿವಿಧ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆದ್ದು ಘಟಕಕ್ಕೆ ಕೀರ್ತಿ ತಂದ ಸದಸ್ಯರು ಹಾಗೂ ವಿದ್ಯಾರ್ಥಿಗಳಿಗೆ ಗೌರವ
ಕೊಲ್ಯ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಉಡುಪಿ ಘಟಕದ ಆತಿಥ್ಯದಲ್ಲಿ ನವೆಂಬರ್ 1ರಂದು ಉಡುಪಿಯಲ್ಲಿ ನಡೆದ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ...

ಕೊಲ್ಯ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಉಡುಪಿ ಘಟಕದ ಆತಿಥ್ಯದಲ್ಲಿ ನವೆಂಬರ್ 1ರಂದು ಉಡುಪಿಯಲ್ಲಿ ನಡೆದ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸುವ ಮೂಲಕ ಕೊಲ್ಯ ಘಟಕಕ್ಕೆ ಕೀರ್ತಿ ತಂದ ಸಾಧಕರನ್ನು ನವೆಂಬರ್ 4ರಂದು ಘಟಕದ ವತಿಯಿಂದ ಸನ್ಮಾನಿಸಲಾಯಿತು.
ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದ ಪ್ರಯುಕ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ಯುವವಾಹಿನಿ ಕೊಲ್ಯ ಘಟಕದ ಸದಸ್ಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವುದು ಘಟಕದ ಹೆಮ್ಮೆಗೆ ಪಾತ್ರವಾಗಿದೆ.
ಕವನ ಹಾಗೂ ವಿಮರ್ಶೆ ಸ್ಪರ್ಧೆಯಲ್ಲಿ ರಶ್ಮಿ ಸನಿಲ್ಗೆ ದ್ವಿತೀಯ ಬಹುಮಾನ
'ವಿಶು ಕಾವ್ಯಮೃತ' ಕವನ ಸ್ಪರ್ಧೆ ಹಾಗೂ 'ವಿಶು ವಿಹಂಗಮ' ವಿಶುಕುಮಾರ್ ವಿರಚಿತ ಕೃತಿಗಳ ವಿಮರ್ಶೆ ಸ್ಪರ್ಧೆಯಲ್ಲಿ ಭಾಗವಹಿಸಿದ ಘಟಕದ ಸದಸ್ಯೆ ರಶ್ಮಿ ಸನಿಲ್ ಅವರು ಎರಡೂ ಸ್ಪರ್ಧೆಗಳಲ್ಲಿ ದ್ವಿತೀಯ ಬಹುಮಾನ ಪಡೆದು ಸಾಧನೆ ಮೆರೆದಿದ್ದಾರೆ.

ರಸಪ್ರಶ್ನೆ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ತಂಡಕ್ಕೆ ಪ್ರಥಮ ಬಹುಮಾನ
'ಜ್ಞಾನ ಮಂಥನ' ರಸಪ್ರಶ್ನೆ ಸ್ಪರ್ಧೆಯಲ್ಲಿ ಘಟಕದ ಸದಸ್ಯ ಪ್ರಶಾಂತ್ ನೆಲ್ಲಿಸ್ತಳ ಅವರ ಪುತ್ರ ದಕ್ಷಿತ್ ಪೂಜಾರಿ, ಅವರ ಸ್ನೇಹಿತ ಪ್ರಯಾಗ್ ಹಾಗೂ ಘಟಕದ ಸದಸ್ಯೆ ಸತ್ಯ ಉದಯ್ ಅವರ ಪುತ್ರಿ ವರ್ಷಾ ಅವರನ್ನೊಳಗೊಂಡ ತಂಡ ಪ್ರಥಮ ಬಹುಮಾನ ಗಳಿಸಿ ಘಟಕಕ್ಕೆ ಗೌರವ ತಂದಿದೆ.
ಕಿರುಚಿತ್ರ ಸ್ಪರ್ಧೆಯಲ್ಲಿ 'Some ಬಂಧ' ಕಿರುಚಿತ್ರಕ್ಕೆ ಪ್ರಶಸ್ತಿ
ಅದೇ ರೀತಿ 'ಸಿನಿದನಿ' ಕಿರುಚಿತ್ರ ಸ್ಪರ್ಧೆಯಲ್ಲಿ ಕೊಲ್ಯ ಘಟಕದ ವತಿಯಿಂದ ನಿರ್ಮಿಸಲಾದ 'Some ಬಂಧ' ಕಿರುಚಿತ್ರವು ಅತ್ಯುತ್ತಮ ಸಾಮಾಜಿಕ ಪರಿಣಾಮ ಬೀರುವ ಕಿರುಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಕಿರುಚಿತ್ರದ ನಿರ್ದೇಶನದ ಜವಾಬ್ದಾರಿ ವಹಿಸಿದ್ದ ಘಟಕದ ಪ್ರಚಾರ ನಿರ್ದೇಶಕ ನಂದನ್ ಪೂಜಾರಿ ಅವರ ಶ್ರಮ ಹಾಗೂ ಸೃಜನಶೀಲತೆಯನ್ನು ಅಧ್ಯಕ್ಷರು ವಿಶೇಷವಾಗಿ ಶ್ಲಾಘಿಸಿದರು.

ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದ ಸ್ಪರ್ಧೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಯಶಸ್ವಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಘಟಕದ ಮಾಜಿ ಅಧ್ಯಕ್ಷ ಹಾಗೂ ವಿಶುಕುಮಾರ್ ದತ್ತಿನಿಧಿ ಸಮಿತಿಯ ಸದಸ್ಯ ಲತೀಶ್ ಎಂ. ಸಂಕೋಳಿಗೆ ಅವರ ಪರಿಶ್ರಮ, ಯೋಜನೆ ಹಾಗೂ ನಿಸ್ವಾರ್ಥ ಸೇವೆಯನ್ನು ಅಧ್ಯಕ್ಷರು ಮುಕ್ತಕಂಠದಿಂದ ಪ್ರಶಂಸಿಸಿದರು.
ಈ ಎಲ್ಲಾ ಸಾಧಕರಾದ ವಿದ್ಯಾರ್ಥಿಗಳ ತಂಡ, ಕಿರುಚಿತ್ರ ನಿರ್ದೇಶಕ ನಂದನ್ ಪೂಜಾರಿ, ಕವನ ಮತ್ತು ವಿಮರ್ಶೆ ಸ್ಪರ್ಧೆಯಲ್ಲಿ ವಿಜೇತರಾದ ರಶ್ಮಿ ಸನಿಲ್ ಹಾಗೂ ಸ್ಪರ್ಧೆಗಳ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಲತೀಶ್ ಎಂ. ಸಂಕೋಳಿಗೆ ಅವರನ್ನು ಘಟಕದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅವರ ಸಾಧನೆಗಳನ್ನು ಸ್ಮರಿಸಿ ಮುಂದೆಯೂ ಇದೇ ರೀತಿಯ ಯಶಸ್ಸು ಸಾಧಿಸುವಂತೆ ಶುಭ ಹಾರೈಸಲಾಯಿತು.

ಇದಲ್ಲದೆ, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತಿ ಹೆಚ್ಚು ಸದಸ್ಯರ ಹಾಜರಾತಿ ದಾಖಲಿಸಿದ ಘಟಕವೆಂಬ ಹೆಗ್ಗಳಿಕೆಯೊಂದಿಗೆ ಕೊಲ್ಯ ಘಟಕ ಬಹುಮಾನ ಪಡೆದಿತ್ತು. ಈ ಸಾಧನೆಗೆ ಶ್ರಮಿಸಿದ ಪ್ರಥಮ ಹಾಗೂ ದ್ವಿತೀಯ ಉಪಾಧ್ಯಕ್ಷರು ಮತ್ತು ಎಲ್ಲಾ ಪದಾಧಿಕಾರಿಗಳಿಗೆ ಅಧ್ಯಕ್ಷರು ವಿಶೇಷ ಧನ್ಯವಾದ ಸಲ್ಲಿಸಿ ಹೂವಿನ ಗಿಡ ನೀಡಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿದ ಸಾಧಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಯುವವಾಹಿನಿ ಕೊಲ್ಯ ಘಟಕದ ಅಧ್ಯಕ್ಷ ಜೀವನ್ ಕೊಲ್ಯ, ನಿಕಟಪೂರ್ವ ಅಧ್ಯಕ್ಷ ನಿತಿನ್ ಕರ್ಕೇರ, ಕಾರ್ಯದರ್ಶಿ ಮುಕೇಶ್ ಕಿನ್ಯ, ಪ್ರಥಮ ಉಪಾಧ್ಯಕ್ಷ ಜೀವನ್ ಬೆರಿಕೆ, ದ್ವಿತೀಯ ಉಪಾಧ್ಯಕ್ಷ ಲತೀಶ್ ಪಾಪುದಡಿ, ಕೇಂದ್ರ ಸಮಿತಿಯ ಮಹಿಳಾ ಸಂಘಟನಾ ನಿರ್ದೇಶಕಿ ಸುಧಾ ಸುರೇಶ್, ಆಂತರಿಕ ಲೆಕ್ಕ ಪರಿಶೋಧಕ ಸುಂದರ್ ಸುವರ್ಣ, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
