ಯುವವಾಹಿನಿ (ರಿ.) ಕೊಲ್ಯ ಘಟಕ: “ಸಪ್ತಕ್ಷೇತ್ರ ದರ್ಶನ – ಪಾವನವಾಯ್ತು ತನುಮನ”
ಯುವವಾಹಿನಿ (ರಿ.) ಕೊಲ್ಯ ಘಟಕದ ವತಿಯಿಂದ ಅಧ್ಯಕ್ಷರಾದ ಜೀವನ್ ಕೊಲ್ಯ ಅವರ ಸಾರಥ್ಯದಲ್ಲಿ ಘಟಕದ ಸದಸ್ಯರು ಹಾಗೂ ಕುಟುಂಬ ವರ್ಗದವರಿಗಾಗಿ “ಸಪ್ತಕ್ಷೇತ್ರ ದರ್ಶನ – ಪಾವನವಾಯ್ತು ತನುಮನ” ಎಂಬ ಶೀರ್ಷಿಕೆಯಡಿ ಒಂದು ದಿನದ ದೇಗುಲ ದರ್ಶನ ಕಾರ್ಯಕ್ರಮವು ಸೆಪ್ಟೆಂಬರ್ 20ರಂದು ನಡೆಯಿತು.

ಕೊಲ್ಯ: ಯುವವಾಹಿನಿ (ರಿ.) ಕೊಲ್ಯ ಘಟಕದ ವತಿಯಿಂದ ಅಧ್ಯಕ್ಷರಾದ ಜೀವನ್ ಕೊಲ್ಯ ಅವರ ಸಾರಥ್ಯದಲ್ಲಿ ಘಟಕದ ಸದಸ್ಯರು ಹಾಗೂ ಕುಟುಂಬ ವರ್ಗದವರಿಗಾಗಿ “ಸಪ್ತಕ್ಷೇತ್ರ ದರ್ಶನ – ಪಾವನವಾಯ್ತು ತನುಮನ” ಎಂಬ ಶೀರ್ಷಿಕೆಯಡಿ ಒಂದು ದಿನದ ದೇಗುಲ ದರ್ಶನ ಕಾರ್ಯಕ್ರಮವು ಸೆಪ್ಟೆಂಬರ್ 20ರಂದು ನಡೆಯಿತು.
ಒಟ್ಟು 58 ಯಾತ್ರಾರ್ಥಿಗಳನ್ನು ಒಳಗೊಂಡ ತಂಡ ಬೆಳಿಗ್ಗೆ 7.50ಕ್ಕೆ ಕೇರಳ–ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿಯಿಂದ ಯಾತ್ರೆ ಆರಂಭಿಸಿತು. ದಾರಿಮಧ್ಯೆ ಕನ್ನಡದ ಮೊದಲ ರಾಷ್ಟ್ರಕವಿ ಗೋವಿಂದ ಪೈ ಅವರ “ಗಿಳಿವಿಂಡು” ನಿವಾಸವನ್ನು ದೂರದಿಂದಲೇ ವೀಕ್ಷಿಸಿದ ತಂಡವು, ನಾರಾಯಣ ಗುರು ತತ್ತ್ವ ಪ್ರಚಾರ ನಿರ್ದೇಶಕ ಶಶಿಕಾಂತ್ ಪರ್ಯತ್ತೂರು ಅವರ ಪ್ರಾರ್ಥನೆಯೊಂದಿಗೆ ಯಾತ್ರೆಯನ್ನು ಮುಂದುವರಿಸಿತು.

ಸಪ್ತಕ್ಷೇತ್ರ ದರ್ಶನದ ಮೊದಲ ಹೆಜ್ಜೆಯಾಗಿ ನಾಗದೋಷ ಪರಿಹಾರಕ್ಕೆ ಪ್ರಸಿದ್ಧವಾದ ಮಂಜೇಶ್ವರ ಶ್ರೀ ಪದ್ಮನಾಭ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಹಾಗೂ ಪ್ರಸಾದ ಸ್ವೀಕರಿಸಲಾಯಿತು. ಬಳಿಕ ಕುಂಬಳೆಯ ಬೆಡಿಗೆ ಪ್ರಸಿದ್ಧವಾಗಿರುವ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ, ನಂತರ ದೇಹದ ಕೆಡು ನಿವಾರಣೆಗೆ ಪ್ರಸಿದ್ಧವಾದ ಮುಜಂಗಾವು ಶ್ರೀ ಪಾರ್ಥಸಾರಥಿ ದೇವಸ್ಥಾನಕ್ಕೆ ತೆರಳಿ ವಿಶಾಲವಾದ ತೀರ್ಥ ಸರೋವರದ ಪುಣ್ಯಜಲವನ್ನು ಸಿಂಪಡಿಸಿಕೊಳ್ಳಲಾಯಿತು.

ಮುಂದೆ ವಿಶ್ವ ಮಟ್ಟದಲ್ಲಿ “ಬಬಿಯಾ” ಮೊಸಳೆಯಿಂದ ಪ್ರಸಿದ್ಧಿ ಪಡೆದಿರುವ ಅನಂತಪುರ ಶ್ರೀ ಅನಂತಪದ್ಮನಾಭ ಕ್ಷೇತ್ರಕ್ಕೆ ಬೆಳಿಗ್ಗೆ ಸುಮಾರು 10.30ಕ್ಕೆ ತಂಡ ತಲುಪಿತು. ದೇವಸ್ಥಾನದ ಎಡಭಾಗದಲ್ಲಿರುವ ಗುಹೆಯಲ್ಲಿ ಧ್ಯಾನಸ್ಥನಾಗಿ ವಿಶ್ರಾಂತಿ ಪಡೆಯುತ್ತಿದ್ದ “ಬಬಿಯಾ” ಮೊಸಳೆಯನ್ನು ಕಣ್ಣಾರೆ ಕಂಡು ಯಾತ್ರಾರ್ಥಿಗಳು ಪುಳಕಿತರಾದರು. ಬಳಿಕ ದೇವಸ್ಥಾನದ ಭೋಜನಶಾಲೆಯಲ್ಲಿ ಉಪಹಾರ ಸ್ವೀಕರಿಸಿ ಯಾತ್ರೆಯನ್ನು ಮುಂದುವರಿಸಲಾಯಿತು.

ನಂತರ ಪುರಾತನ ಸಂಸ್ಕೃತಿಯ ಪ್ರತೀಕವಾಗಿ ಕಂಗೊಳಿಸುವ ಮಧೂರು ಶ್ರೀ ಮದನಂತೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಗಣಪತಿ ದೇವರ ಉದ್ಭವ ಲಿಂಗದ ದರ್ಶನ ಪಡೆಯಲಾಯಿತು. ಮಧ್ಯಾಹ್ನ ಸುಮಾರು ಒಂದು ಗಂಟೆಗೆ ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಹಾಗೂ ಅನ್ನಪ್ರಸಾದ ಸ್ವೀಕರಿಸಲಾಯಿತು.
ಸ್ವಲ್ಪ ಸಮಯ ವಿರಮಿಸಿದ ಬಳಿಕ ತಂಡವು ಬೇಕಲ ಕೋಟೆಯತ್ತ ಪ್ರಯಾಣ ಬೆಳೆಸಿತು. ಸಂಜೆ ಸುಮಾರು ನಾಲ್ಕು ಗಂಟೆಗೆ ಬೇಕಲ ಕೋಟೆ ತಲುಪಿದ ಯಾತ್ರಾರ್ಥಿಗಳು ಸುಮಾರು 80 ಎಕರೆ ಪ್ರದೇಶದಲ್ಲಿ ವಿಸ್ತರಿಸಿರುವ ಐತಿಹಾಸಿಕ ಕೋಟೆಯನ್ನು ವೀಕ್ಷಿಸಿದರು. ಕೆಂಪು ಕಲ್ಲಿನಿಂದ ನಿರ್ಮಿಸಲಾದ ಕೋಟೆಯ ಸುರಂಗ ಮಾರ್ಗಗಳು, ವಿಶಾಲವಾದ ಕೆರೆ ಹಾಗೂ ಸಮುದ್ರದ ಅಲೆಗಳ ದೃಶ್ಯಗಳು ಎಲ್ಲರ ಗಮನ ಸೆಳೆದವು.

ಕೋಟೆ ವೀಕ್ಷಣೆಯ ಬಳಿಕ ಅಲ್ಲಿನ ಉದ್ಯಾನವನದಲ್ಲಿ ಹಿರಿಯರು, ಕಿರಿಯರು ಹಾಗೂ ಮಕ್ಕಳು ವಿವಿಧ ಮನೋರಂಜನಾ ಆಟಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಲಕೋಟೆಯೊಳಗಿನ ವಸ್ತುಗಳನ್ನು ಗುರುತಿಸಿ ಬಹುಮಾನ ಗೆಲ್ಲುವ ಆಟವು ವಿಶೇಷ ಆಕರ್ಷಣೆಯಾಗಿತ್ತು. ಘಟಕದ ಅಧ್ಯಕ್ಷರಾದ ಜೀವನ್ ಕೊಲ್ಯ ಅವರು ನಡೆಸಿಕೊಟ್ಟ “ಹುಲಿ–ದನ” ಆಟವು ಎಲ್ಲರಲ್ಲೂ ಬಾಲ್ಯದ ನೆನಪುಗಳನ್ನು ಮರುಕಳಿಸಿತು.

ಸಂಜೆ 6 ಗಂಟೆಗೆ ಬೇಕಲ ಕೋಟೆಗೆ ವಿದಾಯ ಹೇಳಿದ ತಂಡವು ಯಾತ್ರೆಯ ಕೊನೆಯ ಕ್ಷೇತ್ರವಾದ ತ್ರಿಕರಿನಾಡು ಶ್ರೀ ತ್ರಯಂಭಕೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಮರಳಿತು. ದಾರಿಯುದ್ದಕ್ಕೂ ಸದಸ್ಯರು ಹಾಗೂ ಮಕ್ಕಳು ಹಾಡು, ಕುಣಿತ ಸೇರಿದಂತೆ ವಿವಿಧ ಮನೋರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸಿ ದಿನದ ಆಯಾಸವನ್ನು ಮರೆಸಿದರು. ಯಾತ್ರಾ ಸ್ಥಳಕ್ಕೆ ಮರಳಿದ ಬಳಿಕ ಎಲ್ಲ ಯಾತ್ರಾರ್ಥಿಗಳಿಗೆ ರುಚಿಕರವಾದ ರಾತ್ರಿ ಭೋಜನದ ಪೊಟ್ಟಣವನ್ನು ವಿತರಿಸಲಾಯಿತು.
ಒಂದು ದಿನದ ಈ ಕ್ಷೇತ್ರ ದರ್ಶನವು ಸದಸ್ಯರು ಹಾಗೂ ಕುಟುಂಬ ವರ್ಗದವರ ಮನದಲ್ಲಿ ಮರೆಯಲಾಗದ ಮಧುರ ನೆನಪುಗಳನ್ನು ಮೂಡಿಸುವುದರ ಜೊತೆಗೆ ಪರಸ್ಪರ ಬಂಧುತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿತು.

ಯಾತ್ರೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಮಹಿಳಾ ಸಂಘಟನಾ ನಿರ್ದೇಶಕಿ ಕಸ್ತೂರಿ ವೇಣುಗೋಪಾಲ್ ಕೊಲ್ಯ, ಕೋಶಾಧಿಕಾರಿ ಅನಿತಾ ಸುಂದರ ಸುವರ್ಣ ಹಾಗೂ ಬೆಳಗ್ಗಿನಿಂದ ಸಂಜೆಯವರೆಗೆ ತಮ್ಮ ಪ್ರತಿಭೆಯಿಂದ ಯಾತ್ರಾರ್ಥಿಗಳನ್ನು ರಂಜಿಸಿದ ಪ್ರಚಾರ ನಿರ್ದೇಶಕರಾದ ನಂದನ್ ಕುಂಪಲ, ಕಾರ್ಯದರ್ಶಿ ಮುಕೇಶ್ ಕಿನ್ಯ, ಶಶಿಕಾಂತ್ ಪರ್ಯತ್ತೂರು, ಸ್ಥಾಪಕ ಅಧ್ಯಕ್ಷ ಸುರೇಶ್ ಬಿಲ್ಲವ ಸೇರಿದಂತೆ ಘಟಕದ ಸದಸ್ಯರು ಹಾಗೂ ಮಕ್ಕಳ ಸಹಕಾರದಿಂದ ಕ್ಷೇತ್ರ ದರ್ಶನ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.
