Skip to content
Billava News

ಯುವವಾಹಿನಿ ಮಂಗಳೂರು ಘಟಕದಲ್ಲಿ ಕಾರ್ಗಿಲ್ ವಿಜಯ್ ದಿವಸ್, ಆಟಿದ ಕಂಪು-ನೆಂಪು ಹಾಗೂ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಯಶಸ್ವಿ

ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್, ಆಟಿದ ಕಂಪು-ನೆಂಪು ಹಾಗೂ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಮಂಗಳವಾರ ಸಂಜೆ ಯಶಸ್ವಿಯಾಗಿ ನೆರವೇರಿತು.

By Billavavani
ಯುವವಾಹಿನಿ ಮಂಗಳೂರು ಘಟಕದಲ್ಲಿ ಕಾರ್ಗಿಲ್ ವಿಜಯ್ ದಿವಸ್, ಆಟಿದ ಕಂಪು-ನೆಂಪು ಹಾಗೂ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಯಶಸ್ವಿ

ಮಂಗಳೂರು, ಜು. 28: ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್, ಆಟಿದ ಕಂಪು-ನೆಂಪು ಹಾಗೂ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಮಂಗಳವಾರ ಸಂಜೆ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಆಟಿ ತಿಂಗಳ ಸಾಂಸ್ಕೃತಿಕ, ಐತಿಹಾಸಿಕ ಹಾಗೂ ಆರೋಗ್ಯದ ಮಹತ್ವವನ್ನು ಅನಾವರಣಗೊಳಿಸುವುದರ ಜೊತೆಗೆ ಕಾರ್ಗಿಲ್ ಯೋಧರ ತ್ಯಾಗವನ್ನು ಸ್ಮರಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಭಾಗವಹಿಸಿದ ಡಾ. ಮೀನಾಕ್ಷಿ ರಾಮಚಂದ್ರ, ಹಿಂದಿನ ಕಾಲದಲ್ಲಿ ಆಟಿ ತಿಂಗಳು ಜನರ ಬದುಕಿನಲ್ಲಿ ಎದುರಾಗುತ್ತಿದ್ದ ಸಂಕಷ್ಟಗಳ ಕುರಿತು ಮನಮುಟ್ಟುವ ರೀತಿಯಲ್ಲಿ ವಿವರಿಸಿದರು.

"ಆಟಿ ಎಂದರೆ ಕೇವಲ ಸಂಭ್ರಮದ ತಿಂಗಳು ಅಲ್ಲ. ನಿರಂತರ ಮಳೆಯಿಂದ ಕೆಲಸವಿಲ್ಲದೆ, ಆಹಾರದ ಕೊರತೆಯೊಂದಿಗೆ ಬದುಕಬೇಕಾಗಿದ್ದ ಕಷ್ಟದ ದಿನಗಳು. ನಾನು ಸ್ವತಃ ಹೊಲದಲ್ಲಿ ದುಡಿದು, ಮಣ್ಣಿನ ಮನೆಯಲ್ಲಿ ಜೀವಭಯದ ನಡುವೆ ಬದುಕಿದ ಅನುಭವ ಹೊಂದಿದ್ದೇನೆ. ಆಗ ಆರೋಗ್ಯ ಸಮಸ್ಯೆಗಳಿಗೆ ಪ್ರಕೃತಿಯಲ್ಲೇ ದೊರೆಯುತ್ತಿದ್ದ ಔಷಧೀಯ ಸಸ್ಯಗಳು, ಹಲಸಿನ ಹಣ್ಣು, ಬೀಜಗಳು ಹಾಗೂ ಇತರ ನೈಸರ್ಗಿಕ ಆಹಾರಗಳೇ ಮದ್ದಾಗಿದ್ದವು," ಎಂದು ಅವರು ಹೇಳಿದರು.

1001104720.jpg

ಇಂದಿನ ಪೀಳಿಗೆ ಆಟಿಯನ್ನು ಕೇವಲ ವಿಶೇಷ ತಿನಿಸುಗಳ ತಿಂಗಳೆಂದು ನೋಡುವುದಕ್ಕಿಂತ, ಹಿಂದಿನ ಕಾಲದ ಸಂಕಷ್ಟಗಳನ್ನು ಅರಿತು ಮುಂದಿನ ತಲೆಮಾರಿಗೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಆಟಿ ಕಳಂಜ ಕುರಿತ ಸಾಂಪ್ರದಾಯಿಕ ನಂಬಿಕೆಗಳನ್ನೂ ಅವರು ವಿವರಿಸಿದರು.

1001104721.jpg

ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ನಿವೃತ್ತ ಯೋಧರಾದ ಯೋಗೇಂದ್ರ ಸುವರ್ಣ ಹಾಗೂ ದಿನೇಶ್ ಅವರನ್ನು ಯುವವಾಹಿನಿ ವತಿಯಿಂದ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಯೋಗೇಂದ್ರ ಸುವರ್ಣ, ಕಾರ್ಗಿಲ್ ಯುದ್ಧದಲ್ಲಿ ಟೈಗರ್ ಹಿಲ್ ವಶಪಡಿಸಿಕೊಳ್ಳುವ ವೇಳೆ ಭಾರತೀಯ ಯೋಧರು ಎದುರಿಸಿದ ಸಂಕಷ್ಟಗಳು ಹಾಗೂ ದೇಶರಕ್ಷಣೆಯ ಹೋರಾಟದ ಅನುಭವಗಳನ್ನು ಹಂಚಿಕೊಂಡರು. "ದೇಶಕ್ಕಾಗಿ ಜೀವವನ್ನೇ ಪಣಕ್ಕಿಟ್ಟು ಹೋರಾಡಿದ ಯೋಧರ ತ್ಯಾಗವನ್ನು ಪ್ರತಿಯೊಬ್ಬ ಭಾರತೀಯರೂ ಸದಾ ಸ್ಮರಿಸಬೇಕು" ಎಂದು ಕರೆ ನೀಡಿದ ಅವರು, ಕೊನೆಯಲ್ಲಿ "ಭಾರತ್ ಮಾತಾ ಕೀ ಜೈ" ಘೋಷಣೆ ಮೊಳಗಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ, ಗುರು ಪೂರ್ಣಿಮೆಯ ಅಂಗವಾಗಿ ಗುರುಗಳ ಶತಅಷ್ಟೋತ್ತರ ಪಠಿಸಿ ಪೂಜೆ ಸಲ್ಲಿಸಲಾಯಿತು ಎಂದು ತಿಳಿಸಿದರು. ನಾರಾಯಣ ಗುರುಗಳ ಆದರ್ಶಗಳು ತಮ್ಮ ಬದುಕಿಗೆ ದಾರಿದೀಪವಾಗಿವೆ ಎಂದು ಹೇಳಿದ ಅವರು, ಆಟಿ ತಿಂಗಳ ಹಿಂದಿನ ಜೀವನಶೈಲಿ, ಔಷಧೀಯ ಸಸ್ಯಗಳ ಮಹತ್ವ ಹಾಗೂ ಕಹಿ ಕಷಾಯ ಸೇವನೆಯ ಸಂಪ್ರದಾಯದ ಬಗ್ಗೆ ವಿವರಿಸಿದರು.

1001104723.jpg

ಇಂದಿನ ಪೀಳಿಗೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಸೇವೆಯನ್ನು ಮರೆಯಬಾರದು. ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಯುವವಾಹಿನಿಯೊಂದಿಗೆ ಬೆಳೆಸುವ ಪ್ರಯತ್ನ ಮುಂದುವರಿಯಬೇಕು ಎಂದು ಅವರು ಹೇಳಿದರು.

ಘಟಕದ ಸದಸ್ಯೆ ನೀತಾ ಅಳಪೆ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಘಟಕದ ಸದಸ್ಯರ ಮಕ್ಕಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು, ಸದಸ್ಯರು, ಘಟಕದ ಮಾಜಿ ಅಧ್ಯಕ್ಷರು, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಚಾಲಕಿ ಪೂರ್ಣಿಮಾ ಯು.ಆರ್. ಸ್ವಾಗತಿಸಿದರು. ಸಮಾಜ ಸೇವಾ ನಿರ್ದೇಶಕ ದಿನೇಶ್ ಕಂದಾವರ ವಂದಿಸಿದರು. ಸತೀಶ್ ಕೆ. ಕಾರ್ಯಕ್ರಮ ನಿರೂಪಿಸಿದರು. ಬಳಿಕ ಆಟಿ ತಿಂಗಳ ಸಾಂಪ್ರದಾಯಿಕ ವೈವಿಧ್ಯಮಯ ತಿಂಡಿ-ತಿನಿಸುಗಳ ವ್ಯವಸ್ಥೆ ಮಾಡಲಾಗಿತ್ತು.