ಯುವವಾಹಿನಿ ಮಂಗಳೂರು ಘಟಕ: ಹಣಕಾಸು ನಿರ್ವಹಣೆ ಕಾರ್ಯಕ್ರಮ ಯಶಸ್ವಿ
ಉಜ್ವಲ ಭವಿಷ್ಯದ ದೃಷ್ಟಿಯಿಂದ ಸಮರ್ಪಕ ಉಳಿತಾಯ ಮತ್ತು ಹೂಡಿಕೆ ಮಾಡುವುದು ಅತ್ಯಗತ್ಯ ಎಂದು ಹಣಕಾಸು ತಜ್ಞ ಡಾ. ಬಾಲಾಜಿ ರಾವ್ ಹೇಳಿದರು.

ಮಂಗಳೂರು: ಉಜ್ವಲ ಭವಿಷ್ಯದ ದೃಷ್ಟಿಯಿಂದ ಸಮರ್ಪಕ ಉಳಿತಾಯ ಮತ್ತು ಹೂಡಿಕೆ ಮಾಡುವುದು ಅತ್ಯಗತ್ಯ ಎಂದು ಹಣಕಾಸು ತಜ್ಞ ಡಾ. ಬಾಲಾಜಿ ರಾವ್ ಹೇಳಿದರು.
ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯೊಂದಿಗೆ ಐಸಿಐಸಿಐ ಮ್ಯೂಚುಯಲ್ ಫಂಡ್ ಸಹಕಾರದಲ್ಲಿ ಸೆಪ್ಟೆಂಬರ್ 19, 2026ರಂದು ಸಂಜೆ 6.30ಕ್ಕೆ ಮಂಗಳೂರಿನ ದೀಪಾ ಕಂಫರ್ಟ್‌ನಲ್ಲಿ ನಡೆದ ಹಣಕಾಸು ನಿರ್ವಹಣೆ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಹಿಂದಿನ ದಿನಗಳಲ್ಲಿ ಕಡಿಮೆ ಬೆಲೆಯಲ್ಲಿ ನಿವೇಶನ ಹಾಗೂ ಬಂಗಾರ ಖರೀದಿಸಲು ಜನರು ಹೆಚ್ಚಿನ ಆಸಕ್ತಿ ತೋರುತ್ತಿದ್ದರು. ಪ್ರಸ್ತುತ ಅವುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದರೂ, ದೀರ್ಘಕಾಲದ ಹೂಡಿಕೆಯ ಮಹತ್ವವನ್ನು ಜನರು ಅರಿತುಕೊಳ್ಳಬೇಕು ಎಂದು ಅವರು ವಿವರಿಸಿದರು.
ಬ್ಯಾಂಕ್‌ಗಳ ಉಳಿತಾಯ ಖಾತೆ ಮತ್ತು ಸ್ಥಿರ ಠೇವಣಿಗಳಲ್ಲಿ ಹಣ ಇಡುವುದರಿಂದ ಹೆಚ್ಚಿನ ಭದ್ರತೆ ದೊರೆಯುತ್ತದೆಯಾದರೂ, ಅದರಿಂದ ಲಭಿಸುವ ಪ್ರತಿಫಲ ಸೀಮಿತವಾಗಿರಬಹುದು. ಮ್ಯೂಚುಯಲ್ ಫಂಡ್‌ಗಳಲ್ಲಿ ದೀರ್ಘಕಾಲದ ದೃಷ್ಟಿಕೋನದಿಂದ, ಸೂಕ್ತ ಮಾಹಿತಿ ಹಾಗೂ ಅರಿವಿನೊಂದಿಗೆ ಹೂಡಿಕೆ ಮಾಡಿದರೆ ಸಂಪತ್ತನ್ನು ಬೆಳೆಸಿಕೊಳ್ಳುವ ಅವಕಾಶವಿದೆ ಎಂದು ಅವರು ತಿಳಿಸಿದರು.
ನಿತ್ಯ ಜೀವನದ ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಆದಾಯದ ಒಂದು ಭಾಗವನ್ನು ಸಮರ್ಪಕವಾಗಿ ಉಳಿತಾಯ ಮತ್ತು ಹೂಡಿಕೆ ಮಾಡುವುದು ಅಗತ್ಯ ಎಂದು ಅವರು ಹೇಳಿದರು. ವಿವಿಧ ಹೂಡಿಕೆ ಆಯ್ಕೆಗಳು, ಅವುಗಳ ಲಾಭ-ನಷ್ಟಗಳು, ಯಾವ ರೀತಿಯ ಹೂಡಿಕೆಯನ್ನು ಆಯ್ಕೆ ಮಾಡಬೇಕು ಹಾಗೂ ಹೂಡಿಕೆ ಮಾಡುವಾಗ ಗಮನಿಸಬೇಕಾದ ಅಂಶಗಳ ಕುರಿತು ಪವರ್‌ಪಾಯಿಂಟ್ ಪ್ರಸ್ತುತಿಯ ಮೂಲಕ ಸಂಪೂರ್ಣ ಮಾಹಿತಿಯನ್ನು ನೀಡಿದರು.
ಶೇರು ಮಾರುಕಟ್ಟೆ ಹಾಗೂ ಮ್ಯೂಚುಯಲ್ ಫಂಡ್‌ಗಳಲ್ಲಿ ಮಾರುಕಟ್ಟೆಯ ಏರಿಳಿತಗಳಿಗೆ ಅನುಗುಣವಾಗಿ ಲಾಭದ ಜೊತೆಗೆ ನಷ್ಟದ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ಹೂಡಿಕೆದಾರರು ಸರಿಯಾದ ಮಾಹಿತಿ ಪಡೆದು, ತಮ್ಮ ಆರ್ಥಿಕ ಗುರಿ ಮತ್ತು ಅಪಾಯ ಸ್ವೀಕಾರ ಸಾಮರ್ಥ್ಯಕ್ಕೆ ಅನುಗುಣವಾಗಿ ಹೂಡಿಕೆ ಮಾಡುವ ಅಗತ್ಯವಿದೆ ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಮಂಗಳೂರು ಘಟಕದ ಅಧ್ಯಕ್ಷರಾದ ಹರೀಶ್ ಕೆ. ಸುವರ್ಣ, ಸಂಪನ್ಮೂಲ ವ್ಯಕ್ತಿ ಡಾ. ಬಾಲಾಜಿ ರಾವ್ ಹಾಗೂ ಅತಿಥಿಗಳು ವಿಶಿಷ್ಟ ರೀತಿಯಲ್ಲಿ ಮನಿಪ್ಲಾಂಟ್ ಗೆ ನಾಣ್ಯ ಹಾಕುವುದರ ಮೂಲಕ ಉದ್ಘಾಟಿಸಿದರು.
ಹಣಕಾಸು ನಿರ್ವಹಣೆ ಕಾರ್ಯಕ್ರಮವನ್ನು ನಡೆಸಿಕೊಟ್ಟ ಸಂಪನ್ಮೂಲ ವ್ಯಕ್ತಿ ಹಾಗೂ ಹಣಕಾಸು ತಜ್ಞ ಡಾ. ಬಾಲಾಜಿ ರಾವ್ ಅವರನ್ನು ಯುವವಾಹಿನಿ (ರಿ.) ಮಂಗಳೂರು ಘಟಕದ ಪರವಾಗಿ ಅಧ್ಯಕ್ಷ ಹರೀಶ್ ಕೆ. ಸುವರ್ಣ ಗೌರವಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಘಟಕದ ಅಧ್ಯಕ್ಷರು, ಕಾರ್ಯದರ್ಶಿ, ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು, ಐಸಿಐಸಿಐ ಮ್ಯೂಚುಯಲ್ ಫಂಡ್‌ನ ರೋಹಿತ್ ಶೆಟ್ಟಿ, ರವೀಶ್ ಕುಮಾರ್ ಸೇರಿದಂತೆ ಹಣಕಾಸು ನಿರ್ವಹಣೆಯಲ್ಲಿ ಆಸಕ್ತಿ ಹೊಂದಿರುವವರು ಹಾಗೂ ಹೂಡಿಕೆದಾರರು ಉಪಸ್ಥಿತರಿದ್ದರು.
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾದ ಸವಿತಾ ಕೋಟ್ಯಾನ್ ಸ್ವಾಗತಿಸಿದರು. ಕೋಶಾಧಿಕಾರಿ ಚಂದ್ರಶೇಖರ ಕಿನ್ನಿಗೋಳಿ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದ ಬಳಿಕ ಭಾಗವಹಿಸಿದ್ದವರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
