ಯುವವಾಹಿನಿ ಘಟಕ, ಸುಳ್ಯ: ಗುರುಸ್ಫೂರ್ತಿ ಕಾರ್ಯಕ್ರಮ
ಮಹಾತ್ಮರನ್ನು ಆರಾಧನೆಗೆ ಸೀಮಿತಗೊಳಿಸದೆ ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ: ಸುಧಾಕರ ಸುವರ್ಣ

ಸುಳ್ಯ: ಬ್ರಹ್ಮಶ್ರೀ ನಾರಾಯಣ ಗುರುಗಳಂತಹ ಮಹಾತ್ಮರನ್ನು ಗುಡಿ ಕಟ್ಟಿ ಆರಾಧನೆಗೆ ಮಾತ್ರ ಸೀಮಿತಗೊಳಿಸದೆ, ಅವರ ತತ್ವ, ಆದರ್ಶ ಹಾಗೂ ವಿಚಾರಗಳನ್ನು ಮನನ ಮಾಡಿಕೊಂಡು ಜೀವನದಲ್ಲಿ ಅನುಸರಿಸುವ ಪ್ರಯತ್ನ ಮಾಡಬೇಕು ಎಂದು ಪತ್ರಕರ್ತ ಸುಧಾಕರ ಸುವರ್ಣ ತಿಂಗಳಾಡಿ ಹೇಳಿದರು.
ನ. 8ರಂದು ಸುಳ್ಯ ತಾಲೂಕು ಯುವವಾಹಿನಿ ಘಟಕದ ವತಿಯಿಂದ ಸುಳ್ಯದ ಕಾನತ್ತಿಲದಲ್ಲಿರುವ ಸುಂದರ ಪೂಜಾರಿಯವರ ಮನೆಯಲ್ಲಿ ಆಯೋಜಿಸಲಾದ ಗುರುಸ್ಫೂರ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆಗಳು ಹಾಗೂ ಯುವವಾಹಿನಿಯ ಸಮಾಜಮುಖಿ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ನವೆಂಬರ್ 22ರಂದು ನಡೆಯಲಿರುವ ಯುವವಾಹಿನಿ ಸುಳ್ಯ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಯುವವಾಹಿನಿ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಮಹೇಶ್ ಕಲ್ಲಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿ ನಿರ್ದೇಶಕ ಲೋಹಿತ್ ರೆಂಜಾಳ, ಕಾರ್ಯದರ್ಶಿ ರಂಜಿತ್ ದರ್ಕಾಸ್ ಹಾಗೂ ಕೋಶಾಧಿಕಾರಿ ಹರೀಶ್ ದೋಳ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಆತಿಥ್ಯ ನೀಡಿದ ಸುಂದರ ಪೂಜಾರಿ ಮಾತನಾಡಿದರು. ಘಟಕದ ಮಾಜಿ ಅಧ್ಯಕ್ಷ ಚಂದ್ರಶೇಖರ ಹೈದಂಗೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ನಿಯೋಜಿತ ಅಧ್ಯಕ್ಷೆ ನೂತನಾ ಪ್ರವೀಣ್ ನೆಟ್ಟಾರು ಸೇರಿದಂತೆ ಹಲವು ಸಮಾಜ ಬಾಂಧವರು ಭಾಗವಹಿಸಿದ್ದರು.
ಆರಂಭದಲ್ಲಿ ಗುರುಸ್ಮರಣೆಯ ಅಂಗವಾಗಿ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಲಘು ಉಪಾಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
