ಯುವವಾಹಿನಿ ಪಡುಬಿದ್ರಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ; ನೂತನ ಅಧ್ಯಕ್ಷರಾಗಿ ಶ್ರೀ ನಿಖಿಲ್ ಪೂಜಾರಿ
ಪಡುಬಿದ್ರಿ, ಆಗಸ್ಟ್ 30: ಪಡುಬಿದ್ರಿಯ ಸಹಕಾರ ಸಂಗಮ ಸಿ.ಎ. ಸೊಸೈಟಿ ಸಭಾಂಗಣದಲ್ಲಿ ಭಾನುವಾರ ನಡೆದ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ 2026-27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ...

ಪಡುಬಿದ್ರಿ, ಆಗಸ್ಟ್ 30: ಪಡುಬಿದ್ರಿಯ ಸಹಕಾರ ಸಂಗಮ ಸಿ.ಎ. ಸೊಸೈಟಿ ಸಭಾಂಗಣದಲ್ಲಿ ಭಾನುವಾರ ನಡೆದ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ 2026-27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ನಡೆಯಿತು ಹಾಗೂ ಪಿ.ಕೆ. ಜಯರಾಮ್ ಪ್ರವರ್ತಿತ ವಿದ್ಯಾನಿಧಿ ವಿತರಣೆ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಶ್ರೀ ಅಶೋಕ್ ಕುಮಾರ್ ಪಡ್ಪು ಅವರು ನೂತನ ಅಧ್ಯಕ್ಷ ಶ್ರೀ ನಿಖಿಲ್ ಪೂಜಾರಿ ಹಾಗೂ ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಬಳಿಕ ನಿರ್ಗಮಿತ ಅಧ್ಯಕ್ಷ ಶ್ರೀ ವಿಧಿತ್ ಕುಮಾರ್ ಕರ್ನಿರೆ ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ತಮ್ಮ ಅಧ್ಯಕ್ಷಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಅವರು, ನೂತನ ತಂಡದ ಮುಂದಿನ ಕಾರ್ಯಯೋಜನೆಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಯುವ ಉದ್ಯಮಿ ಶ್ರೀ ಗಣೇಶ್ ಗುಜರನ್, ಮಂಗಳೂರಿನ ಎ.ಜೆ. ವೈದ್ಯಕೀಯ ಮಹಾವಿದ್ಯಾಲಯದ ಮನೋವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ. ಪಿ.ಕೆ. ಕಿರಣ್ ಕುಮಾರ್, ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಶ್ರೀ ವೈ. ಸುಧೀರ್ ಕುಮಾರ್ ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಮಮತಾ ರಾಜ್ ಉಪಸ್ಥಿತರಿದ್ದರು.

ಅತಿಥಿಗಳು ಯುವವಾಹಿನಿ ಪಡುಬಿದ್ರಿ ಘಟಕವು ಕಳೆದ ಸಾಲಿನಲ್ಲಿ ಕೈಗೊಂಡ ವಿವಿಧ ಸಮಾಜಮುಖಿ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಶಂಸಿಸಿ, ನೂತನ ಕಾರ್ಯಕಾರಿ ಸಮಿತಿಗೆ ಶುಭ ಹಾರೈಸಿದರು.
ಸಮಾರಂಭದ ಅಂಗವಾಗಿ ಸಮಾಜದ ಆರ್ಥಿಕವಾಗಿ ಹಿಂದುಳಿದ ಅರ್ಹ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ‘ಪಿ.ಕೆ. ಜಯರಾಮ್ ಪ್ರವರ್ತಿತ ವಿದ್ಯಾನಿಧಿ’ಯನ್ನು ವಿತರಿಸಲಾಯಿತು. ಇದೇ ವೇಳೆ ಯುವವಾಹಿನಿ ಸದಸ್ಯರ ಕುಟುಂಬಗಳ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ‘ಪ್ರತಿಭಾ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಘಟಕದ ಚಟುವಟಿಕೆಗಳಿಗೆ ನಿರಂತರ ಮಾರ್ಗದರ್ಶನ ಮತ್ತು ಸಹಕಾರ ನೀಡುತ್ತಿರುವ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಶ್ರೀ ಅಶೋಕ್ ಕುಮಾರ್ ಪಡ್ಪು ಅವರನ್ನು ಘಟಕದ ವತಿಯಿಂದ ವಿಶೇಷವಾಗಿ ಗೌರವಿಸಲಾಯಿತು.

ಕಳೆದ ಸಾಲಿನಲ್ಲಿ ಘಟಕವನ್ನು ಯಶಸ್ವಿಯಾಗಿ ಮುನ್ನಡೆಸಿದ ನಿರ್ಗಮಿತ ಅಧ್ಯಕ್ಷ ಶ್ರೀ ವಿಧಿತ್ ಪೂಜಾರಿ, ಘಟಕದ ಮಾಜಿ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಸಹ ಕೃತಜ್ಞತಾಪೂರ್ವಕವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀಮತಿ ಸುಗಂಧಿ ಶ್ಯಾಮ್ ಪ್ರಾರ್ಥಿಸಿದರು. ನಿರ್ಗಮಿತ ಅಧ್ಯಕ್ಷ ಶ್ರೀ ವಿಧಿತ್ ಕುಮಾರ್ ಗಣ್ಯರನ್ನು ಸ್ವಾಗತಿಸಿದರು. ಘಟಕದ ಮಾಜಿ ಅಧ್ಯಕ್ಷ ಶ್ರೀ ಸುಜಿತ್ ಕುಮಾರ್ ಕಾರ್ಯಕ್ರಮದ ಪ್ರಸ್ತಾವನೆಗೈದರು. ನಿರ್ಗಮಿತ ಕಾರ್ಯದರ್ಶಿ ಶ್ರೀ ಭಾಸ್ಕರ್ ಎನ್. ಅಂಚನ್ ವಾರ್ಷಿಕ ವರದಿ ಮಂಡಿಸಿದರು.

ನೂತನ ಕಾರ್ಯದರ್ಶಿ ಶ್ರೀಮತಿ ರಾಜೇಶ್ವರಿ ಅವಿನಾಶ್ ಧನ್ಯವಾದ ಸಮರ್ಪಿಸಿದರು. ಶ್ರೀಮತಿ ಚೈತ್ರ ಗಣೇಶ್, ಶ್ರೀಮತಿ ಚೈತ್ರ ಮನೋಹರ್ ಹಾಗೂ ಶ್ರೀ ಹರೀಶ್ ಕೋಟ್ಯಾನ್ ಉಳ್ಳೂರು ಕಾರ್ಯಕ್ರಮ ನಿರ್ವಹಿಸಿದರು. ಘಟಕದ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಹಾಗೂ ಸಮಾಜದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
