Skip to content
Billava News

ಯುವವಾಹಿನಿ (ರಿ.) ಮಂಗಳೂರು ಘಟಕ: ಭಾರತ ನಿರ್ಮಾಣದಲ್ಲಿ, ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ, ಶಿಕ್ಷಕರ ಪಾತ್ರ ಮಹತ್ತರವಾದದ್ದು: ಲತಾಕಿಶೋರ್ ಕೆ. ಬಿಜೈ

ಭಾರತದ ಮಾಜಿ ರಾಷ್ಟ್ರಪತಿ, ಮಹಾನ್ ತತ್ವಜ್ಞಾನಿ ಹಾಗೂ ಶಿಕ್ಷಣತಜ್ಞ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಮಂಗಳೂರು ಘಟಕದ ವತಿಯಿಂದ ಆಚರಿಸಲಾಯಿತು.

By Billavavani
ಯುವವಾಹಿನಿ (ರಿ.) ಮಂಗಳೂರು ಘಟಕ: ಭಾರತ ನಿರ್ಮಾಣದಲ್ಲಿ, ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ, ಶಿಕ್ಷಕರ ಪಾತ್ರ ಮಹತ್ತರವಾದದ್ದು: ಲತಾಕಿಶೋರ್ ಕೆ. ಬಿಜೈ

ಮಂಗಳೂರು: ಭಾರತದ ಮಾಜಿ ರಾಷ್ಟ್ರಪತಿ, ಮಹಾನ್ ತತ್ವಜ್ಞಾನಿ ಹಾಗೂ ಶಿಕ್ಷಣತಜ್ಞ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಮಂಗಳೂರು ಘಟಕದ ವತಿಯಿಂದ ಆಚರಿಸಲಾಯಿತು.

ಸೆಪ್ಟೆಂಬರ್ 5, 1888ರಂದು ತಮಿಳುನಾಡಿನ ತಿರುತ್ತಣಿಯಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮ್ಮ ಜೀವನವನ್ನು ಶಿಕ್ಷಣ, ತತ್ವಶಾಸ್ತ್ರ ಮತ್ತು ರಾಷ್ಟ್ರಸೇವೆಗೆ ಮುಡಿಪಾಗಿಟ್ಟಿದ್ದರು. ತಂದೆ ಸರ್ವಪಲ್ಲಿ ವೀರಸ್ವಾಮಿ ಜಮೀನ್ದಾರರೊಬ್ಬರ ಬಳಿ ಕಂದಾಯ ಅಧಿಕಾರಿಯಾಗಿದ್ದರು. ಆರು ಮಕ್ಕಳಲ್ಲಿ ನಾಲ್ಕನೇ ಮಗನಾಗಿದ್ದ ರಾಧಾಕೃಷ್ಣನ್ ಅವರ ಶಿಕ್ಷಣವು ಕುಟುಂಬದ ಆರ್ಥಿಕ ಸಂಕಷ್ಟದ ನಡುವೆಯೂ ವಿದ್ಯಾರ್ಥಿವೇತನದ ನೆರವಿನಿಂದ ಮುಂದುವರಿಯಿತು.

22.jpeg

ತಿರುತ್ತಣಿ ಹಾಗೂ ತಿರುಪತಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, 1896ರಲ್ಲಿ ತಿರುಪತಿಯ ವಾಲಜಾಪೇಟೆಯ ಹರ್ಮನ್ಸ್‌ಬರ್ಗ್ ಇವಾಂಜೆಲಿಕಲ್ ಲುಥೆರನ್ ಮಿಷನ್ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದರು. ಬಳಿಕ ವೆಲ್ಲೂರಿನಲ್ಲಿ ಕಾಲೇಜು ಶಿಕ್ಷಣ ಆರಂಭಿಸಿ, 16ನೇ ವಯಸ್ಸಿನಲ್ಲಿ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿಗೆ ಸೇರ್ಪಡೆಗೊಂಡರು. ತಮ್ಮ ಸೋದರ ಸಂಬಂಧಿಯೊಬ್ಬರು ನೀಡಿದ ತತ್ವಶಾಸ್ತ್ರದ ಪುಸ್ತಕಗಳ ಪ್ರಭಾವದಿಂದ ಅವರು ತತ್ವಶಾಸ್ತ್ರವನ್ನು ತಮ್ಮ ಅಧ್ಯಯನದ ವಿಷಯವಾಗಿ ಆಯ್ಕೆ ಮಾಡಿಕೊಂಡರು. ಕೇವಲ 20ನೇ ವಯಸ್ಸಿನಲ್ಲೇ ತತ್ವಶಾಸ್ತ್ರದಲ್ಲಿ ಬಿ.ಎ. ಹಾಗೂ ಎಂ.ಎ. ಪದವಿಗಳನ್ನು ಪೂರ್ಣಗೊಳಿಸಿದರು.

ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು ಬಳಿಕ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿಯೂ ಬೋಧನೆ ಮಾಡಿದರು. ದೇಶದ ಶಿಕ್ಷಣ ಮತ್ತು ತತ್ವಶಾಸ್ತ್ರ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಅವರು 1952ರಲ್ಲಿ ಭಾರತದ ಮೊದಲ ಉಪರಾಷ್ಟ್ರಪತಿಯಾಗಿ ಹಾಗೂ 1962ರಿಂದ 1967ರವರೆಗೆ ಭಾರತದ ಎರಡನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಘಟಕದ ಸದಸ್ಯೆ ಹಾಗೂ ಶಿಕ್ಷಕಿ ಲತಾ ಕಿಶೋರ್ ಕೆ., ಬಿಜೈ ಅವರು ಡಾ. ರಾಧಾಕೃಷ್ಣನ್ ಅವರ ಜೀವನ ಮತ್ತು ಗುರು-ಶಿಷ್ಯರ ಬಾಂಧವ್ಯದ ಕುರಿತು ಮಾಹಿತಿ ನೀಡಿದರು. ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳು ಗುರುಗಳನ್ನು ಪವಿತ್ರ ಭಯ ಮತ್ತು ಗೌರವದಿಂದ ಕಾಣುತ್ತಿದ್ದರು. ಆಗ ವಿದ್ಯಾರ್ಜನೆ ಗುರುಕೇಂದ್ರಿತವಾಗಿದ್ದು, ಶಿಕ್ಷಕರು ಬೋಧಿಸಿದುದನ್ನು ವಿದ್ಯಾರ್ಥಿಗಳು ಆಲಿಸಿ ಕಲಿಯುತ್ತಿದ್ದರು. ಆದರೆ ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರು ಮಾರ್ಗದರ್ಶಕರ ಪಾತ್ರವನ್ನು ನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳು ಚರ್ಚೆ, ಪ್ರಾಜೆಕ್ಟ್‌ಗಳು ಹಾಗೂ ಸ್ವಯಂ ಕಲಿಕೆಯ ಮೂಲಕ ಜ್ಞಾನವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಅವರು ವಿವರಿಸಿದರು.

4.jpeg

ಹಿಂದಿನ ದಿನಗಳಲ್ಲಿ ಕಲಿಕೆಯು ಕಪ್ಪು ಹಲಗೆ ಮತ್ತು ಪುಸ್ತಕಗಳಿಗೆ ಸೀಮಿತವಾಗಿದ್ದರೆ, ಇಂದು ಡಿಜಿಟಲ್ ತಂತ್ರಜ್ಞಾನ ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ. ಸ್ಮಾರ್ಟ್ ಕ್ಲಾಸ್‌ಗಳು, ಯೂಟ್ಯೂಬ್ ಹಾಗೂ ಇಂಟರ್ನೆಟ್‌ನಂತಹ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳು ಹೊಸ ಜ್ಞಾನವನ್ನು ಪಡೆದುಕೊಳ್ಳುತ್ತಿದ್ದಾರೆ. ಇಂದಿನ ಮಕ್ಕಳು ನಾಳಿನ ಪ್ರಜೆಗಳಾಗಿದ್ದು, ಉತ್ತಮ ಭವಿಷ್ಯದ ಭಾರತ ನಿರ್ಮಾಣಕ್ಕೆ ಅಗತ್ಯವಾದ ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.

ಶಿಕ್ಷಕರ ದಿನಾಚರಣೆ ಅಂಗವಾಗಿ ಮಾಹಿತಿ ನೀಡಿದ ಲತಾ ಕಿಶೋರ್ ಕೆ. ಅವರನ್ನು ಘಟಕದ ಪರವಾಗಿ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾದ ಶ್ರೀಮತಿ ಸವಿತಾ ಕೋಟ್ಯಾನ್ ಗೌರವಿಸಿದರು.

ಗುರು ಸಂದೇಶವನ್ನು ಘಟಕದ ಪ್ರವಾಸ ಸಹ ಸಂಚಾಲಕರಾದ ಶ್ರೀ ಸತೀಶ್ ಜಿ.ಪಿ. ವಾಚಿಸಿದರು. ಕಾರ್ಯಕ್ರಮದಲ್ಲಿ ಘಟಕದ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಮಂಗಳೂರು ಘಟಕದ ಅಧ್ಯಕ್ಷರಾದ ಶ್ರೀ ಹರೀಶ್ ಕೆ. ಸುವರ್ಣ ಸ್ವಾಗತಿಸಿದರು. ಕಾರ್ಯದರ್ಶಿ ಕುಮಾರಿ ಉಷಾ ವರದಿ ವಾಚಿಸಿದರು. ಉಪಾಧ್ಯಕ್ಷರಾದ ಶ್ರೀ ಯತೀಶ್ ಬಳಂಜ ಧನ್ಯವಾದ ಅರ್ಪಿಸಿದರು. ಲೋಕ ಕಲ್ಯಾಣ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.