Skip to content
Billava News

ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕ: ನಾರಾಯಣ ಗುರು ಜಯಂತಿ ಆಚರಣೆ

ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿಯನ್ನು ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕದ ವತಿಯಿಂದ ವಿವಿಧ ಸಮಾಜಗಳ ಮುಖಂಡರು ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಆ.30ರಂದು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.

By Billavavani
ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕ: ನಾರಾಯಣ ಗುರು ಜಯಂತಿ ಆಚರಣೆ

ಉಪ್ಪಿನಂಗಡಿ: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿಯನ್ನು ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕದ ವತಿಯಿಂದ ವಿವಿಧ ಸಮಾಜಗಳ ಮುಖಂಡರು ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಆ.30ರಂದು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.

ಘಟಕದ ಅಧ್ಯಕ್ಷ ಮನೋಜ್ ಎನ್. ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಷಣ್ಮುಖ ದೇವಸ್ಥಾನ ಕಾಂಚನ ಪೆರ್ಲದ ಆಡಳಿತ ಮೊಕ್ತೇಸರ ಧನ್ಯಕುಮಾರ್ ರೈ ಬಿಳಿಯೂರುಗುತ್ತು ಹಾಗೂ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಅಧ್ಯಕ್ಷ ಕರುಣಾಕರ ಸುವರ್ಣ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

1001145479.jpg

ಧನ್ಯಕುಮಾರ್ ರೈ ಮಾತನಾಡಿ, ನಾರಾಯಣ ಗುರುಗಳು ಸಾಮಾಜಿಕ ಕ್ರಾಂತಿಕಾರಿಯಾಗಿದ್ದು, ಅವರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ. ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಗುರುಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಕರುಣಾಕರ ಸುವರ್ಣ ಮಾತನಾಡಿ, ಅಶಕ್ತರಿಗೆ ಆಹಾರ ಕಿಟ್ ವಿತರಿಸುವ ಮೂಲಕ ಯುವವಾಹಿನಿ ನಾರಾಯಣ ಗುರು ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಶ್ಲಾಘನೀಯ ಎಂದರು. ಉಪನ್ಯಾಸಕ ಶಿವರಾಜ್ ಗಟ್ಟಿ ಅವರು ನಾರಾಯಣ ಗುರುಗಳು ಸರ್ವಮಾನವ ಕುಲದ ಗುರುಗಳಾಗಿದ್ದು, ಅವರ ಸಂದೇಶಗಳು ಎಲ್ಲರಿಗೂ ಸ್ಪೂರ್ತಿದಾಯಕವಾಗಿವೆ ಎಂದರು.

ಜಯಂತಿ ಅಂಗವಾಗಿ ಪ್ರಾಥಮಿಕ ವಿಭಾಗದಲ್ಲಿ ‘ಅಸ್ಪೃಶ್ಯತೆ ನಿವಾರಣೆಗೆ ನಾರಾಯಣ ಗುರುಗಳ ಕೊಡುಗೆ’ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ‘ಸ್ವಾಸ್ಥ್ಯ ಸಮಾಜಕ್ಕಾಗಿ ನಾರಾಯಣ ಗುರುಗಳ ಸಂದೇಶ’ ವಿಷಯಗಳ ಕುರಿತು ಭಾಷಣ ಸ್ಪರ್ಧೆ ನಡೆಯಿತು.

ಪ್ರಾಥಮಿಕ ವಿಭಾಗದಲ್ಲಿ ಇಂದ್ರಪ್ರಸ್ಥ ವಿದ್ಯಾಲಯದ ಹೃಷಿಕೇಶ್ ಪ್ರಥಮ ಹಾಗೂ ಅಂಡೆತಡ್ಕ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಚಾರ್ವಿ ದ್ವಿತೀಯ ಸ್ಥಾನ ಪಡೆದರು. ಪ್ರೌಢಶಾಲಾ ವಿಭಾಗದಲ್ಲಿ ಇಂದ್ರಪ್ರಸ್ಥ ವಿದ್ಯಾಲಯದ ಆದಿತ್ರಿ ಮುರಳೀಧರ ಪೆರಿಯಡ್ಕ ಪ್ರಥಮ ಹಾಗೂ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಜಶ್ಮಿತಾ ದ್ವಿತೀಯ ಸ್ಥಾನ ಪಡೆದರು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಗೌರವ ಸ್ಮರಣಿಕೆ ನೀಡಲಾಯಿತು.

‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು’ ಎಂಬ ನಾರಾಯಣ ಗುರುಗಳ ಸಂದೇಶದಂತೆ ಐದು ಅಶಕ್ತ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು. ಆರ್ಥಿಕ ಸಮಸ್ಯೆಯಿಂದ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗದ ಗಾಯತ್ರಿ ಎಂಬ ವಿದ್ಯಾರ್ಥಿನಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಮೂತ್ರೆದಾರರ ಬ್ಯಾಂಕ್‌ನಲ್ಲಿ 31 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಮತಿ ಯಶೋಧರವರು ವಿದ್ಯಾರ್ಥಿವೇತನ ವಿತರಿಸಿದರು.

1001145482.jpg1001145480.jpg

ಸಮಾರೋಪ ಸಮಾರಂಭದಲ್ಲಿ ಡಾ. ನಿರಂಜನ್ ರೈ, ಡಾ. ರಾಜಾರಾಮ್ ಕೆ. ಬಿ., ಡಾ. ಸದಾನಂದ ಕುಂದರ್, ಅಜಿತ್ ಕುಮಾರ್ ಪಾಲೇರಿ, ವರದರಾಜ್ ಎಂ. ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ ಕಡಬ ಉಪಸ್ಥಿತರಿದ್ದು ಶುಭ ಹಾರೈಸಿದರು.

ಶಿವರಾಜ್ ಗಟ್ಟಿ, ಸುನೀತಾ ಹಾಗೂ ವನಿತಾ ಕೃಷ್ಣಪ್ಪ ತೀರ್ಪುಗಾರರಾಗಿ ಸಹಕರಿಸಿದರು. ಕು. ಅಭಿಜ್ಞಾ ಪ್ರಾರ್ಥಿಸಿದರು. ಲಿಖಿತ್ ಎಂ. ಜಿ. ಧನ್ಯವಾದ ಸಲ್ಲಿಸಿದರು. ನಯನಾ ಮನೋಹರ್ ಹಾಗೂ ಸುನೀಲ್ ಪೆರ್ನೆ ಕಾರ್ಯಕ್ರಮ ನಿರೂಪಿಸಿದರು. ಯುವವಾಹಿನಿ ಘಟಕದ ಮಾಜಿ ಅಧ್ಯಕ್ಷರು, ನಿರ್ದೇಶಕರು, ಸದಸ್ಯರು, ಶಿಕ್ಷಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.