ಆಟಿದ ನೆಂಪು–2026: ಪವರ್‌ಲಿಫ್ಟಿಂಗ್ ಸಾಧಕಿ ಅಕ್ಷತಾ ಪೂಜಾರಿಗೆ ಯುವವಾಹಿನಿ ಬಜಪೆ ಘಟಕದಿಂದ ಸನ್ಮಾನ
ಆಟಿದ ನೆಂಪು–2026" ಕಾರ್ಯಕ್ರಮದಲ್ಲಿ ಕರಾವಳಿಯ ಹೆಮ್ಮೆಯ ಪವರ್‌ಲಿಫ್ಟಿಂಗ್ ಕ್ರೀಡಾಸಾಧಕಿ ಶ್ರೀಮತಿ ಅಕ್ಷತಾ ಪೂಜಾರಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಬಜ್ಪೆ, ಜುಲೈ 19: ಯುವವಾಹಿನಿ (ರಿ.) ಬಜಪೆ ಘಟಕದ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಭಾನುವಾರ ನಡೆದ "ಆಟಿದ ನೆಂಪು–2026" ಕಾರ್ಯಕ್ರಮದಲ್ಲಿ ಕರಾವಳಿಯ ಹೆಮ್ಮೆಯ ಪವರ್‌ಲಿಫ್ಟಿಂಗ್ ಕ್ರೀಡಾಸಾಧಕಿ ಶ್ರೀಮತಿ ಅಕ್ಷತಾ ಪೂಜಾರಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಬಡತನದ ಸವಾಲುಗಳನ್ನು ಮೆಟ್ಟಿ ನಿಂತು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪವರ್‌ಲಿಫ್ಟಿಂಗ್ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಅಕ್ಷತಾ ಪೂಜಾರಿ ಅವರ ಸಾಧನೆಯನ್ನು ಗುರುತಿಸಿ ಈ ಗೌರವ ಪ್ರದಾನ ಮಾಡಲಾಯಿತು.
ಉಡುಪಿ ಜಿಲ್ಲೆಯ ಬೋಳ ಗ್ರಾಮದವರಾದ ಅಕ್ಷತಾ ಪೂಜಾರಿ ಅವರು 2025ರಲ್ಲಿ ಪ್ರಶಾಂತ್ ಎಸ್. ಸುವರ್ಣ ಅವರನ್ನು ವಿವಾಹವಾಗಿದ್ದು, ಪ್ರಸ್ತುತ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಸಮೀಪದ ಮೇಗಿನ ಉಳಿರೋಡಿ ಗ್ರಾಮದ ಸೊಸೆಯಾಗಿ ಅಲ್ಲಿನ ಜನರ ಹೆಮ್ಮೆಗೂ ಪಾತ್ರರಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಯುವವಾಹಿನಿ ಬಜಪೆ ಘಟಕದ ಪದಾಧಿಕಾರಿಗಳು, ಜೀವನದ ಸಂಕಷ್ಟಗಳನ್ನು ಮೆಟ್ಟಿ ನಿಂತು ನೂರಾರು ಕಿಲೋ ತೂಕದ ಕಬ್ಬಿಣದ ಸಲಾಕೆಗಳನ್ನು ಎತ್ತಿ ದೇಶಕ್ಕೆ ಕೀರ್ತಿ ತಂದಿರುವ ಅಕ್ಷತಾ ಪೂಜಾರಿ ಅವರ ಸಾಧನೆ ಯುವಜನತೆಗೆ ಸ್ಪೂರ್ತಿದಾಯಕವಾಗಿದೆ ಎಂದು ಅಭಿನಂದಿಸಿದರು.
ಸಭೆಯಲ್ಲಿ ಗಣ್ಯರ ಸಮ್ಮುಖದಲ್ಲಿ ಅಕ್ಷತಾ ಪೂಜಾರಿ ಅವರಿಗೆ ಸನ್ಮಾನಿಸಿ, ಅವರ ಮುಂದಿನ ಜೀವನದಲ್ಲಿ ಇನ್ನಷ್ಟು ಯಶಸ್ಸು, ಸುಖ-ಸಂತೋಷ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಗಳನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಲಾಯಿತು.
