ಬಿಲ್ಲವಾಸ್ ಫ್ಯಾಮಿಲಿ ದುಬೈ ಅಧ್ಯಕ್ಷರಾಗಿ ದೀಪಕ್ ಎಸ್.ಪಿ. 2ನೇ ಬಾರಿಗೆ ಅವಿರೋಧ ಆಯ್ಕೆ
ದುಬೈ: ಯುಎಇಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಬಿಲ್ಲವಾಸ್ ಫ್ಯಾಮಿಲಿ ದುಬೈ ಸಂಘಟನೆಯ 2026-2028ನೇ ಸಾಲಿನ ಪದಗ್ರಹಣ ಸಮಾರಂಭವು ಜುಲೈ 11, 2026ರಂದು ದುಬೈಯ ಪ್ರತಿಷ್ಠಿತ ಹೋಟೆಲೊಂದರಲ್ಲಿ ಸರಳ ಹಾಗೂ ಅರ್ಥಪೂರ್ಣವಾಗಿ ನಡೆಯಿತು.

ದುಬೈ: ಯುಎಇಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಬಿಲ್ಲವಾಸ್ ಫ್ಯಾಮಿಲಿ ದುಬೈ ಸಂಘಟನೆಯ 2026-2028ನೇ ಸಾಲಿನ ಪದಗ್ರಹಣ ಸಮಾರಂಭವು ಜುಲೈ 11, 2026ರಂದು ದುಬೈಯ ಪ್ರತಿಷ್ಠಿತ ಹೋಟೆಲೊಂದರಲ್ಲಿ ಸರಳ ಹಾಗೂ ಅರ್ಥಪೂರ್ಣವಾಗಿ ನಡೆಯಿತು.
ಸಂಘದ ಅಧ್ಯಕ್ಷರಾಗಿ ಶ್ರೀ ದೀಪಕ್ ಎಸ್.ಪಿ. ಅವರು ಸತತ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು, ಸದಸ್ಯರು ಹಾಗೂ ಪದಾಧಿಕಾರಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತು.
ಕಾರ್ಯಕ್ರಮದಲ್ಲಿ ಸಂಘದ ಗೌರವ ಸಲಹೆಗಾರರಾದ ಶ್ರೀ ಜಿತೇಂದ್ರ ಸುವರ್ಣ, ಶ್ರೀ ಮೋಹನ್ ಅತ್ತಾವರ, ಶ್ರೀ ಸತೀಶ್ ಪೂಜಾರಿ, ಶ್ರೀ ಮಾಧವ ಪೂಜಾರಿ, ಶ್ರೀ ಪ್ರಕಾಶ್ ಪೂಜಾರಿ, ಶ್ರೀ ಪ್ರಭಾಕರ ಸುವರ್ಣ ಹಾಗೂ ಶ್ರೀ ಕೃಷ್ಣ ಪೂಜಾರಿ ಅವರು ನೂತನ ಸಮಿತಿಯ ಪದಾಧಿಕಾರಿಗಳನ್ನು ಅಭಿನಂದಿಸಿ, ಸಂಘವು ಇನ್ನಷ್ಟು ಬೆಳೆಯಲಿ ಹಾಗೂ ಸಮಾಜ ಸೇವೆಯಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಲಿ ಎಂದು ಶುಭ ಹಾರೈಸಿದರು.

2026-2028ನೇ ಸಾಲಿನ ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ಶ್ರೀ ದೀಪಕ್ ಎಸ್.ಪಿ., ಉಪಾಧ್ಯಕ್ಷರಾಗಿ ಪ್ರೇಮ್ ಕೋಟ್ಯಾನ್ ಮತ್ತು ಜಗನ್ನಾಥ್ ಬೆಳ್ಳಾರೆ, ಪ್ರಧಾನ ಕಾರ್ಯದರ್ಶಿಯಾಗಿ ರವಿ ಕೋಟ್ಯಾನ್, ಉಪ ಕಾರ್ಯದರ್ಶಿಯಾಗಿ ಯತಿರಾಜ್ ಕೋಟ್ಯಾನ್, ಖಜಾಂಚಿಯಾಗಿ ಪ್ರಭಾಕರ್ ಪೂಜಾರಿ ಹಾಗೂ ಲೆಕ್ಕ ಪರಿಶೋಧಕರಾಗಿ ಪ್ರಭಾಕರ್ ಸುವರ್ಣ ಕರ್ನಿರೆ ಆಯ್ಕೆಯಾದರು.
ಅದೇ ರೀತಿ ಕ್ರೀಡಾ, ಸಾಂಸ್ಕೃತಿಕ, ಮನೋರಂಜನೆ ಹಾಗೂ ಡಿಜಿಟಲ್ ತಂಡಗಳಿಗೆ ವಿವಿಧ ಸದಸ್ಯರನ್ನು ನೇಮಕಗೊಳಿಸಲಾಯಿತು. ಮಾಧ್ಯಮ ಸಲಹೆಗಾರರಾಗಿ ರಮೇಶ್ ಸುವರ್ಣ ಕಾರ್ಯನಿರ್ವಹಿಸಲಿದ್ದು, ಸಂಘದ ಹಿರಿಯರು ಗೌರವ ಸಲಹೆಗಾರರಾಗಿ ಮಾರ್ಗದರ್ಶನ ನೀಡಲಿದ್ದಾರೆ.
ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ದೀಪಕ್ ಎಸ್.ಪಿ. ಅವರು ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ಪದಾಧಿಕಾರಿಗಳು ಹಾಗೂ ಸದಸ್ಯರು ನೀಡಿದ ಅಮೂಲ್ಯ ಸಹಕಾರವನ್ನು ಸ್ಮರಿಸಿದರು. ಹಿರಿಯರಿಂದ ಕಿರಿಯರವರೆಗೆ ಎಲ್ಲರೂ ಸಂಘಟನೆಯ ಬೆನ್ನೆಲುಬಾಗಿ ನಿಂತು ಸಂಘದ ಬೆಳವಣಿಗೆಗೆ ಕೈಜೋಡಿಸಿದರೆ ಇನ್ನಷ್ಟು ಸಾಧನೆಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟ ಅವರು, ಮುಂದಿನ ದಿನಗಳಲ್ಲಿಯೂ ಎಲ್ಲರ ಸಹಕಾರವನ್ನು ಕೋರಿದರು.
ಕಾರ್ಯದರ್ಶಿ ರವಿ ಕೋಟ್ಯಾನ್ ಅವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ರಿತೇಶ್ ಅಂಚನ್ ಕುಲಶೇಖರ ಅವರು ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಬಿಲ್ಲವಾಸ್ ಫ್ಯಾಮಿಲಿ ದುಬೈಯ ನಿಕಟ ಪೂರ್ವ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
