Skip to content
Billava News

ಪ್ರಾಣ ಪಣಕ್ಕಿಟ್ಟು ಯುವತಿಯನ್ನು ರಕ್ಷಿಸಿದ ಉದಯ ಕುಮಾರ್ ಶೆಟ್ಟಿ ದೇರಂಬಳಗೆ ಬಿರುವೆರ್ ಕುಡ್ಲ ಮಂಜೇಶ್ವರ ಸನ್ಮಾನ

ಪ್ರಾಣ ಪಣಕ್ಕಿಟ್ಟು ಯುವತಿಯನ್ನು ರಕ್ಷಿಸಿದ ಉದಯ ಕುಮಾರ್ ಶೆಟ್ಟಿ ದೇರಂಬಳಗೆ ಬಿರುವೆರ್ ಕುಡ್ಲ ಮಂಜೇಶ್ವರ ಸನ್ಮಾನ

By Billavavani
ಪ್ರಾಣ ಪಣಕ್ಕಿಟ್ಟು ಯುವತಿಯನ್ನು ರಕ್ಷಿಸಿದ ಉದಯ ಕುಮಾರ್ ಶೆಟ್ಟಿ ದೇರಂಬಳಗೆ ಬಿರುವೆರ್ ಕುಡ್ಲ ಮಂಜೇಶ್ವರ ಸನ್ಮಾನ

ಮಂಜೇಶ್ವರ: ಬಿರುವೆರ್ ಕುಡ್ಲ ಮಂಜೇಶ್ವರ ತಾಲೂಕು ಘಟಕದ ಸದಸ್ಯರಾದ ಐತಪ್ಪ ಪೂಜಾರಿ ದೇರಂಬಳ ಅವರ ಪುತ್ರಿ ಕುಮಾರಿ ಸುಶ್ಮಿತಾ ಅವರು ಭಾರೀ ಮಳೆಯ ನಡುವೆಯೂ ಕಾಲೇಜಿನಿಂದ ತನ್ನ ತಂಗಿಯನ್ನು ಕರೆತರಲು ತೆರಳಿದ್ದ ವೇಳೆ ಅಪಾಯಕ್ಕೀಡಾದ ಘಟನೆ ನಡೆದಿದೆ.

1001095200.jpg

ಉಪ್ಪಳದ ಜೋಡುಕಲ್ಲು ಪ್ರದೇಶದ ದೇರಂಬಳ ನದಿಗೆ ಅಡಿಕೆ ಮರದಿಂದ ನಿರ್ಮಿಸಲಾಗಿದ್ದ ತಾತ್ಕಾಲಿಕ ಕಾಲುಸಂಕ ದಾಟುತ್ತಿದ್ದ ವೇಳೆ ಸುಶ್ಮಿತಾ ಕಾಲು ಜಾರಿ ಉಕ್ಕಿ ಹರಿಯುತ್ತಿದ್ದ ನದಿಗೆ ಬಿದ್ದಿದ್ದರು. ಈ ದೃಶ್ಯವನ್ನು ಕಂಡ ತಂಗಿ ನಿಶ್ಮಿತಾ ಜೋರಾಗಿ ಕೂಗಿಕೊಂಡಾಗ, ಸಮೀಪದಲ್ಲಿದ್ದ ಉದಯ ಕುಮಾರ್ ಶೆಟ್ಟಿ ಅವರು ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ನದಿಗೆ ಧುಮುಕಿದರು.

1001095199.jpg

ಸುಮಾರು 200 ಮೀಟರ್ ದೂರದವರೆಗೆ ನೀರಿನಲ್ಲಿ ತೇಲಿ ಹೋಗುತ್ತಿದ್ದ ಸುಶ್ಮಿತಾ ಅವರನ್ನು ಸಾಹಸದಿಂದ ರಕ್ಷಿಸುವಲ್ಲಿ ಉದಯ ಕುಮಾರ್ ಶೆಟ್ಟಿ ಯಶಸ್ವಿಯಾದರು. ಅವರ ಈ ಮಾನವೀಯತೆ ಹಾಗೂ ಸಾಹಸಕ್ಕೆ ಸ್ಥಳೀಯರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಉದಯ ಕುಮಾರ್ ಶೆಟ್ಟಿ ಅವರ ಈ ಶ್ಲಾಘನೀಯ ಕಾರ್ಯವನ್ನು ಗುರುತಿಸಿ ಬಿರುವೆರ್ ಕುಡ್ಲ ಮಂಜೇಶ್ವರ ತಾಲೂಕು ಘಟಕದ ವತಿಯಿಂದ ಇಂದು ಸುಶ್ಮಿತಾ ಅವರ ನಿವಾಸದಲ್ಲಿ ಗೌರವಧನ ನೀಡಿ, ಶಾಲು ಹೊದಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಘಟಕದ ಗೌರವಾಧ್ಯಕ್ಷ ಶೀನಪ್ಪ ಪೂಜಾರಿ ಅಲಾರು, ಪ್ರಧಾನ ಕಾರ್ಯದರ್ಶಿ ಅನಿಲ್ ಪ್ರತಾಪನಗರ ಹಾಗೂ ಸದಸ್ಯರಾದ ಆನಂದ ಬೀರಿಗುಡ್ಡೆ, ಹರಿಣಿ ಪ್ರತಾಪನಗರ, ಜಯಂತಿ ಹಾಗೂ ಇತರರು ಉಪಸ್ಥಿತರಿದ್ದರು.