ಕೋಟಿ-ಚೆನ್ನಯ್ಯ ಟ್ರೋಫಿ–ಸೀಸನ್ 2: ಸ್ನೇಹ, ಕ್ರೀಡಾಸ್ಫೂರ್ತಿ ಮತ್ತು ಸಂಘಟನಾ ಬಾಂಧವ್ಯದ ಸಂಗಮ, ಯುವವಾಹಿನಿ ಬೆಂಗಳೂರು ಘಟಕ
ಯುವವಾಹಿನಿ (ರಿ.) ಬೆಂಗಳೂರು ಘಟಕದ ಸದಸ್ಯರಿಗಾಗಿ ಆಯೋಜಿಸಲಾದ "ಕೋಟಿ-ಚೆನ್ನಯ್ಯ ಟ್ರೋಫಿ – ಸೀಸನ್ 2" ಬ್ಯಾಡ್ಮಿಂಟನ್ ಕ್ರೀಡಾಕೂಟವು ಭಾನುವಾರ (ಜು. 19) ಬೆಂಗಳೂರಿನ ದಾಸರಹಳ್ಳಿ ಸಮೀಪದ ಎಎಂ ಸ್ಪೋರ್ಟ್ಸ್ ಅರೆನಾದಲ್ಲಿ ಉತ್ಸಾಹಭರಿತವಾಗಿ ಹಾಗೂ ಯಶಸ್ವಿಯಾಗಿ ನಡೆಯಿತು.

ಬೆಂಗಳೂರು, ಜು. 19: ಯುವವಾಹಿನಿ (ರಿ.) ಬೆಂಗಳೂರು ಘಟಕದ ಸದಸ್ಯರಿಗಾಗಿ ಆಯೋಜಿಸಲಾದ "ಕೋಟಿ-ಚೆನ್ನಯ್ಯ ಟ್ರೋಫಿ – ಸೀಸನ್ 2" ಬ್ಯಾಡ್ಮಿಂಟನ್ ಕ್ರೀಡಾಕೂಟವು ಭಾನುವಾರ (ಜು. 19) ಬೆಂಗಳೂರಿನ ದಾಸರಹಳ್ಳಿ ಸಮೀಪದ ಎಎಂ ಸ್ಪೋರ್ಟ್ಸ್ ಅರೆನಾದಲ್ಲಿ ಉತ್ಸಾಹಭರಿತವಾಗಿ ಹಾಗೂ ಯಶಸ್ವಿಯಾಗಿ ನಡೆಯಿತು.
ಬೆಳಿಗ್ಗೆ ಸುಮಾರು 7.45ಕ್ಕೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ನಿತ್ಯಾನಂದ ಶೆಟ್ಟಿ ಹಾಗೂ ಶ್ರೀ ನಂಜುಂಡ ಪೂಜಾರಿ ಅವರು, ಘಟಕದ ಅಧ್ಯಕ್ಷ ಶ್ರೀ ವಿಜೇತ್ ವಿ. ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಬಳಿಕ ಮುಖ್ಯ ಅತಿಥಿಗಳನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ನಂಜುಂಡ ಪೂಜಾರಿ ಅವರು, ಇಂತಹ ಕ್ರೀಡಾಕೂಟಗಳು ದೈಹಿಕ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ಸದಸ್ಯರ ನಡುವೆ ಸ್ನೇಹ, ಬಾಂಧವ್ಯ ಹಾಗೂ ಸಂಘಟನಾ ಮನೋಭಾವವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಬಳಿಕ ಶ್ರೀ ನಿತ್ಯಾನಂದ ಶೆಟ್ಟಿ ಹಾಗೂ ಶ್ರೀ ನಂಜುಂಡ ಪೂಜಾರಿ ಅವರು ಕೋಟಿ-ಚೆನ್ನಯ್ಯ ಟ್ರೋಫಿಯನ್ನು ಅನಾವರಣಗೊಳಿಸಿದರು. ನಂತರ ಸಾಂಕೇತಿಕ ಬ್ಯಾಡ್ಮಿಂಟನ್ ಪಂದ್ಯವನ್ನು ಆರಂಭಿಸುವ ಮೂಲಕ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಲಾಯಿತು.
ಕ್ರೀಡಾಕೂಟದಲ್ಲಿ ಸದಸ್ಯರನ್ನು ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ನಾಲ್ಕು ತಂಡಗಳಾಗಿ ವಿಂಗಡಿಸಿ ಪಂದ್ಯಗಳನ್ನು ಆಯೋಜಿಸಲಾಗಿತ್ತು. ದಕ್ಷಿಣ ಕನ್ನಡದ ನಾಲ್ಕು ನದಿಗಳ ಹೆಸರಿನಲ್ಲಿ ಶಾಂಭವಿ ಸ್ಟ್ರೈಕರ್ಸ್, ಪಾಲ್ಗುಣಿ ಪವರ್, ನೇತ್ರಾವತಿ ಸ್ಮ್ಯಾಶರ್ಸ್ ಹಾಗೂ ನಂದಿನಿ ನೆಟ್ ವಾರಿಯರ್ಸ್ ತಂಡಗಳನ್ನು ರಚಿಸಲಾಗಿತ್ತು. ಎಲ್ಲಾ ತಂಡಗಳು ಉತ್ತಮ ಕ್ರೀಡಾಸ್ಫೂರ್ತಿಯೊಂದಿಗೆ ಸ್ಪರ್ಧಿಸಿ ಗಮನ ಸೆಳೆದವು.
ಭಾಗವಹಿಸಿದ ಸದಸ್ಯರಿಗೆ ಬೆಳಗಿನ ಉಪಹಾರ, ಮಧ್ಯಾಹ್ನ ಮಂಗಳೂರು ಶೈಲಿಯ ಮಾಂಸಾಹಾರಿ ಊಟ ಹಾಗೂ ಸಂಜೆ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಘಟಕದ ಅಧ್ಯಕ್ಷ ಶ್ರೀ ವಿಜೇತ್ ವಿ. ಪೂಜಾರಿ ಅವರೊಂದಿಗೆ ಮುಖ್ಯ ಅತಿಥಿಗಳಾದ ಗಣೇಶ್ ಅಮೀನ್, ಜಗನ್ನಾಥ ಪೂಜಾರಿ ಹಾಗೂ ರೋಹಿತ್ ಎಸ್., ಗೌರವ ಸಲಹೆಗಾರರಾದ ಕೆ.ಬಿ. ಜಯರಾಮ್ ಮತ್ತು ಸುಧೀರ್ ಎಸ್. ಪೂಜಾರಿ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್ ಕಲ್ಲಾಜೆ, ಕಾರ್ಯದರ್ಶಿ ಮನೋಜ್ ಕುಮಾರ್ ಟಿ. ಹಾಗೂ ಕ್ರೀಡಾ ನಿರ್ದೇಶಕರಾದ ಕುಮಾರಿ ಅನುಷಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಮಾರಿ ಅನುಷಾ ಸ್ವಾಗತ ಭಾಷಣ ಮಾಡಿದ್ದು, ಮತ್ತೋರ್ವ ಕ್ರೀಡಾ ನಿರ್ದೇಶಕ ಚೇತನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿ ರೋಹಿತ್ ಎಸ್. ಮಾತನಾಡಿ, ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ಆಯೋಜಿಸಿರುವ ಸಂಘಟಕರನ್ನು ಅಭಿನಂದಿಸಿ, ಯುವವಾಹಿನಿಯ ಸದಸ್ಯರು ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಘಟಕದ ಅಧ್ಯಕ್ಷ ಶ್ರೀ ವಿಜೇತ್ ವಿ. ಪೂಜಾರಿ ಮಾತನಾಡಿ, ಕ್ರೀಡಾಕೂಟದ ಯಶಸ್ಸಿಗೆ ಪ್ರತಿಯೊಬ್ಬ ಸದಸ್ಯ, ಸಂಘಟಕ ಹಾಗೂ ಸ್ವಯಂಸೇವಕರ ಕೊಡುಗೆ ಅಮೂಲ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್ ಕಲ್ಲಾಜೆ ಅವರು ಸದಸ್ಯರು ಕ್ರೀಡೆಯಷ್ಟೇ ಅಲ್ಲದೆ ಘಟಕದ ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಕ್ರೀಡಾಕೂಟಕ್ಕೆ ಆರ್ಥಿಕ ನೆರವು ನೀಡಿದ ದಾನಿಗಳನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ನಾಲ್ಕು ತಂಡಗಳ ನಾಯಕರನ್ನು ಹಾಗೂ ಬ್ರಾಹ್ಮರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ನಾಲ್ವರು ತೀರ್ಪುಗಾರರನ್ನೂ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ದಿನವಿಡೀ ನಡೆದ ಪಂದ್ಯಗಳು ರೋಚಕವಾಗಿದ್ದು, ಆಟಗಾರರು ಮತ್ತು ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ವಿಜೇತ ಹಾಗೂ ರನ್ನರ್-ಅಪ್ ತಂಡಗಳಿಗೆ ಮುಖ್ಯ ಅತಿಥಿಗಳು ಟ್ರೋಫಿ, ಪ್ರಶಸ್ತಿ ಹಾಗೂ ಸ್ಮರಣಿಕೆಗಳನ್ನು ವಿತರಿಸಿ ಅಭಿನಂದಿಸಿದರು. ಎಲ್ಲಾ ತಂಡಗಳ ನಾಯಕರು, ಆಟಗಾರರು, ಸಂಘಟಕರು ಹಾಗೂ ಸ್ವಯಂಸೇವಕರ ಸೇವೆಯನ್ನು ಇದೇ ಸಂದರ್ಭದಲ್ಲಿ ಶ್ಲಾಘಿಸಲಾಯಿತು.
ಕಾರ್ಯಕ್ರಮದ ಅಂತ್ಯದಲ್ಲಿ ಯುವವಾಹಿನಿ (ರಿ.) ಬೆಂಗಳೂರು ಘಟಕದ ಕಾರ್ಯದರ್ಶಿ ಶ್ರೀ ಮನೋಜ್ ಕುಮಾರ್ ಟಿ. ಧನ್ಯವಾದ ಸಮರ್ಪಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಅತಿಥಿಗಳು, ದಾನಿಗಳು, ಪ್ರಾಯೋಜಕರು, ಸದಸ್ಯರು, ಪದಾಧಿಕಾರಿಗಳು ಹಾಗೂ ಕ್ರೀಡಾಪಟುಗಳಿಗೆ ಕೃತಜ್ಞತೆ ಸಲ್ಲಿಸಿದರು. ಸಾಂಸ್ಕೃತಿಕ ನಿರ್ದೇಶಕಿ ಮಧುಶ್ರೀ ಬಂಗೇರ ಕಾರ್ಯಕ್ರಮವನ್ನು ನಿರೂಪಿಸಿದರು.
Relatedಸಂಬಂಧಿತ

ಪ್ರಾಣ ಪಣಕ್ಕಿಟ್ಟು ಯುವತಿಯನ್ನು ರಕ್ಷಿಸಿದ ಉದಯ ಕುಮಾರ್ ಶೆಟ್ಟಿ ದೇರಂಬಳಗೆ ಬಿರುವೆರ್ ಕುಡ್ಲ ಮಂಜೇಶ್ವರ ಸನ್ಮಾನ
ಪ್ರಾಣ ಪಣಕ್ಕಿಟ್ಟು ಯುವತಿಯನ್ನು ರಕ್ಷಿಸಿದ ಉದಯ ಕುಮಾರ್ ಶೆಟ್ಟಿ ದೇರಂಬಳಗೆ ಬಿರುವೆರ್ ಕುಡ್ಲ ಮಂಜೇಶ್ವರ ಸನ್ಮಾನ
5h ago
ಬಿಲ್ಲವಾಸ್ ಫ್ಯಾಮಿಲಿ ದುಬೈ ಅಧ್ಯಕ್ಷರಾಗಿ ದೀಪಕ್ ಎಸ್.ಪಿ. 2ನೇ ಬಾರಿಗೆ ಅವಿರೋಧ ಆಯ್ಕೆ
ದುಬೈ: ಯುಎಇಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಬಿಲ್ಲವಾಸ್ ಫ್ಯಾಮಿಲಿ ದುಬೈ ಸಂಘಟನೆಯ 2026-2028ನೇ ಸಾಲಿನ ಪದಗ್ರಹಣ ಸಮಾರಂಭವು ಜುಲೈ 11, 2026ರಂದು ದುಬೈಯ ಪ್ರತಿಷ್ಠಿತ ಹೋಟೆಲೊಂದರಲ್ಲಿ ಸರಳ ಹಾಗೂ ಅರ್ಥಪೂರ್ಣವಾಗಿ ನಡೆಯಿತು.
5h ago
ಶ್ರೀ ಎಲ್.ವಿ. ಅಮೀನ್ ಅವರ 75ನೇ ಜನ್ಮದಿನ: 'ಲೋಕ ಸೇವಕ ಎಲ್.ವಿ. ಅಮೀನ್' ಗೌರವ ಗ್ರಂಥ ಪ್ರಕಟಣೆ ಸಮಾಜಸೇವೆಗೆ ಸಂದ ಗೌರವ
ಬಜ್ಪೆ: ರಾಷ್ಟ್ರದ ಆರ್ಥಿಕ ರಾಜಧಾನಿ ಮುಂಬೈನ ಹೆಸರಾಂತ ಉದ್ಯಮಿ, ಸಮಾಜ ಸಂಘಟಕ ಹಾಗೂ ಬಜ್ಪೆ ದೊಡ್ಡಿಕಟ್ಟ ಮನೆತನದ ಹೆಮ್ಮೆಯ ಪುತ್ರರಾದ ಶ್ರೀ ಎಲ್.ವಿ. ಅಮೀನ್ ಅವರ ಜೀವನ ಸಾಧನೆಯನ್ನು ಆಧರಿಸಿದ "ಲೋಕ ಸೇವಕ ಎಲ್.ವಿ. ಅಮೀನ್" ಗೌರವ ಗ್ರಂಥವನ್ನು ಮುಂಬೈ ...
2d ago
ಬ್ರಹ್ಮಾವರ ಬಿಲ್ಲವ ಯುವ ವೇದಿಕೆಯ ನೂತನ ಅಧ್ಯಕ್ಷರಾಗಿ ಶ್ರೀ ಸಚಿನ್ ಪೂಜಾರಿ ಹೇರೂರು ಆಯ್ಕೆ
ಬಿಲ್ಲವವಾಣಿ ವತಿಯಿಂದ ಶ್ರೀ ಸಚಿನ್ ಪೂಜಾರಿ ಹೇರೂರು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಗಿದ್ದು, ಅವರ ಮುಂದಿನ ಜೀವನ ಹಾಗೂ ನಾಯಕತ್ವದ ಪಯಣ ಉಜ್ವಲ...
2d ago