ಯುವವಾಹಿನಿ ಕೊಲ್ಯ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ: ₹1 ಲಕ್ಷ 43 ಸಾವಿರ ವಿದ್ಯಾನಿಧಿ ವಿತರಣೆ
ಯುವವಾಹಿನಿ (ರಿ) ಕೊಲ್ಯ ಘಟಕದ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಗುರುಪೂಜೆಯೊಂದಿಗೆ ಘಟಕದ ಅಧ್ಯಕ್ಷ ಶ್ರೀ ನಿತಿನ್ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ನಡೆಯಿತು.

ಕೊಲ್ಯ: ಯುವವಾಹಿನಿ (ರಿ) ಕೊಲ್ಯ ಘಟಕದ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಗುರುಪೂಜೆಯೊಂದಿಗೆ ಘಟಕದ ಅಧ್ಯಕ್ಷ ಶ್ರೀ ನಿತಿನ್ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ನಡೆಯಿತು.

ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ) ಕೊಲ್ಯ–ಸೋಮೇಶ್ವರದ ಅಧ್ಯಕ್ಷ ಶ್ರೀ ಶೇಷಪ್ಪ ಬೈದ್ಯಮನೆ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯುವವಾಹಿನಿಯ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿ, ಕಳೆದ ಒಂದು ವರ್ಷದಲ್ಲಿ ಘಟಕವನ್ನು ಯಶಸ್ವಿಯಾಗಿ ಮುನ್ನಡೆಸಿದ ಅಧ್ಯಕ್ಷ ಶ್ರೀ ನಿತಿನ್ ಕರ್ಕೇರ ಹಾಗೂ ಅವರ ತಂಡವನ್ನು ಅಭಿನಂದಿಸಿದರು. ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದ ಅವರು, ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವಂತೆ ಕರೆ ನೀಡಿದರು.

ವೇದಿಕೆಯಲ್ಲಿ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಶ್ರೀ ಅಶೋಕ್ ಕುಮಾರ್ ಪಡ್ಪು, ಎಸ್.ಆರ್.ಆರ್. ಮಸಾಲಾ ಸಂಸ್ಥೆಯ ಸಂಸ್ಥಾಪಕರು ಹಾಗೂ ಗುರು ಚಾರಿಟೇಬಲ್ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಶ್ರೀ ಶೈಲೇಂದ್ರ ವೈ. ಸುವರ್ಣ, ಸೆಂಟ್ ಅಲೋಶಿಯಸ್ ಪಿಯು ಕಾಲೇಜಿನ ಪ್ರಾಧ್ಯಾಪಕ ಶ್ರೀ ಮೋಹನ್ ರಾಜ್, ಕೆನರಾ ಬ್ಯಾಂಕ್ ದಕ್ಷಿಣ ಕನ್ನಡ ಜಿಲ್ಲೆಯ ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಶ್ರೀಮತಿ ಗೀತಾ ಯಶೋಧರ್, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶ್ರೀ ಗಣೇಶ್ ಕೆ. ಮಹಾಕಾಳಿ, ಬಿಲ್ಲವ ಸೇವಾ ಸಮಾಜ (ರಿ) ಕೊಲ್ಯದ ಅಧ್ಯಕ್ಷ ಶ್ರೀ ಗೋಪಾಲ ಎಸ್. ಕೊಂಡಾಣ ಹಾಗೂ ನಾರಾಯಣಗುರು ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ತ್ರಿವೇಣಿ ಉದಯ್ ಕುಂಪಲ ಉಪಸ್ಥಿತರಿದ್ದರು.

ಆಯ್ಕೆ ಸಮಿತಿ ಸಂಚಾಲಕಿ ಶ್ರೀಮತಿ ಸುಧಾ ಸುರೇಶ್ ಅವರು 2026–27ನೇ ಸಾಲಿನ ಕಾರ್ಯಕಾರಿ ಸಮಿತಿಯ ಪಟ್ಟಿಯನ್ನು ಪ್ರಕಟಿಸಿದರು. ಬಳಿಕ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಶ್ರೀ ಅಶೋಕ್ ಕುಮಾರ್ ಪಡ್ಪು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶ್ರೀ ಜೀವನ್ ಕಾಸಿಂಬೆಟ್ಟು ಮಾತನಾಡಿ, ಘಟಕವನ್ನು ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ಎಲ್ಲರ ಸಹಕಾರ ಕೋರಿದರು.
ಮುಖ್ಯ ಅತಿಥಿ ಶ್ರೀಮತಿ ಗೀತಾ ಯಶೋಧರ್, ಶ್ರೀ ಮೋಹನ್ ರಾಜ್ ಹಾಗೂ ಶ್ರೀ ಶೈಲೇಂದ್ರ ವೈ. ಸುವರ್ಣ ಅವರು ಯುವಜನತೆ ಶಿಕ್ಷಣ, ಸಂಸ್ಕೃತಿ, ಸಮಾಜಸೇವೆ ಹಾಗೂ ಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದರು.

ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಶ್ರೀ ಅಶೋಕ್ ಕುಮಾರ್ ಪಡ್ಪು ಮಾತನಾಡಿ, ಕೊಲ್ಯ ಘಟಕದ ಒಂಬತ್ತು ವರ್ಷಗಳ ಸಾಧನೆಯನ್ನು ಶ್ಲಾಘಿಸಿ, ಯುವಕರನ್ನು ಇನ್ನಷ್ಟು ಸಂಘಟಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಘಟಕದ ಸದಸ್ಯರ 12 ಮಕ್ಕಳನ್ನು ಅಭಿನಂದಿಸಲಾಯಿತು. ಇದೇ ವೇಳೆ ಘಟಕದ ಸೇವಾ ಯೋಜನೆ ಹಾಗೂ ಸದಸ್ಯರ ಸಹಕಾರದಿಂದ ಸಂಗ್ರಹಿಸಲಾದ ₹1 ಲಕ್ಷ 43ಸಾವಿರ ವಿದ್ಯಾನಿಧಿಯನ್ನು ಅಗತ್ಯವಿರುವ ಘಟಕ ಹಾಗೂ ಸಮಾಜದ 20 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಕಲಾ ಕ್ಷೇತ್ರದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಗಂಗಾಧರ್ ಕುಜುಮಗದ್ದೆ ಹಾಗೂ ಜನಪದ ಕ್ಷೇತ್ರದ ಸಾಧಕಿ ಶ್ರೀಮತಿ ವಸಂತಿ ಅಮೀನ್ ಅವರನ್ನು ಅಭಿನಂದಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಡಾ. ಅಪೂರ್ವ ಆರ್. ಕೆಂಜಾರು ಹಾಗೂ ಡಾ. ಅನ್ವಿತಾ ಜಗಜೀವನ್ ಅವರನ್ನು ಸನ್ಮಾನಿಸಲಾಯಿತು.
ಕೀರ್ತಿಶೇಷ ರಮಾನಾಥ್ ಕೋಟೆಕಾರ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಕಥಾ ಹಾಗೂ ಕವನ ಸ್ಪರ್ಧೆಯ ವಿಜೇತರಿಗೆ ಶ್ರೀ ಲತೀಶ್ ಸಂಕೋಳಿಗೆ ಅವರ ಸಂಚಾಲಕತ್ವದಲ್ಲಿ ಬಹುಮಾನ ವಿತರಿಸಲಾಯಿತು. ಪ್ರಾಯೋಜಕರಾದ ಶ್ರೀಮತಿ ಆಶಾ ರಮಾನಾಥ್ ಕೋಟೆಕಾರ್ ಅವರನ್ನು ಸಮಾಜಸೇವೆ ಹಾಗೂ ಸಾಹಿತ್ಯ ಪ್ರೋತ್ಸಾಹಕ್ಕಾಗಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಶ್ರೀ ಅಶೋಕ್ ಕುಮಾರ್ ಪಡ್ಪು ಅವರನ್ನು ಘಟಕದ ವತಿಯಿಂದ ಸನ್ಮಾನಿಸಲಾಯಿತು. 2025–26ನೇ ಸಾಲಿನ ಅಧ್ಯಕ್ಷ ಶ್ರೀ ನಿತಿನ್ ಕರ್ಕೇರ ಹಾಗೂ ಕಾರ್ಯದರ್ಶಿ ಶ್ರೀಮತಿ ಸೌಮ್ಯ ಯೋಗೀಶ್ ಅವರನ್ನು ಅಭಿನಂದಿಸಲಾಯಿತು. ಕಳೆದ ಒಂದು ವರ್ಷದ ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸಿದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ವಿವಿಧ ಘಟಕಗಳ ಅಧ್ಯಕ್ಷರನ್ನು ಶಾಲು ಹೊದಿಸಿ ಗೌರವಿಸಲಾಯಿತು.
"ಬೇಗ ಬನ್ನಿ – ಬಹುಮಾನ ಗೆಲ್ಲಿ" ಅದೃಷ್ಟ ಚೀಟಿ ಬಹುಮಾನ ವಿತರಣೆಯಲ್ಲಿ ಶ್ರೀ ರಘುರಾಮ್ ಸುವರ್ಣ ಹಾಗೂ ಶ್ರೀ ಕುಸುಮಾಕರ್ ಕುಂಪಲ ವಿಜೇತರಾದರು. ಪದಗ್ರಹಣ ಕಾರ್ಯಕ್ರಮದ ಅಂಗವಾಗಿ ಸದಸ್ಯರು ಹಾಗೂ ಸದಸ್ಯರ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕುಮಾರಿ ಯಶಿಕ ಪರ್ಯಾತ್ತೂರು, ಕುಮಾರಿ ಉನ್ನತಿ ಪರ್ಯಾತ್ತೂರು ಹಾಗೂ ಕುಮಾರಿ ಭೂಮಿಕಾ ಆರ್. ಸುವರ್ಣ ಪ್ರಾರ್ಥಿಸಿದರು. ಅಧ್ಯಕ್ಷ ಶ್ರೀ ನಿತಿನ್ ಕರ್ಕೇರ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಮತಿ ಸೌಮ್ಯ ಯೋಗೀಶ್ ಗತಸಭೆಯ ವರದಿ ಮಂಡಿಸಿದರು. ದ್ವಿತೀಯ ಉಪಾಧ್ಯಕ್ಷ ಶ್ರೀ ಜೀವನ್ ಬೆರಿಕೆ ಪ್ರಸ್ತಾವನೆಗೈದರು. ನೂತನ ಕಾರ್ಯದರ್ಶಿ ಶ್ರೀ ಮುಕೇಶ್ ಕಿನ್ಯ ಧನ್ಯವಾದ ಸಲ್ಲಿಸಿದರು. ಶ್ರೀ ಲತೀಶ್ ಎಂ. ಸಂಕೋಳಿಗೆ, ಶ್ರೀಮತಿ ರಶ್ಮಿತಾ ಸನಿಲ್ ಹಾಗೂ ಕುಮಾರಿ ಯಶಿಕ ಪರ್ಯಾತ್ತೂರು ಕಾರ್ಯಕ್ರಮ ನಿರೂಪಿಸಿದರು.
