Skip to content
Billava News

ಯುವವಾಹಿನಿ ಮಂಗಳೂರು ಘಟಕದಲ್ಲಿ ಧೂಮಪಾನ ನಿಷೇಧ ಹಾಗೂ ತಂಬಾಕು ನಿಯಂತ್ರಣ ಕಾನೂನು ಕುರಿತು ಜಾಗೃತಿ ಕಾರ್ಯಕ್ರಮ

ಯುವವಾಹಿನಿ (ರಿ.) ಮಂಗಳೂರು ಘಟಕದ ಸಾಪ್ತಾಹಿಕ ಸಭೆಯು ಘಟಕದ ಅಧ್ಯಕ್ಷರಾದ ಶ್ರೀ ಹರೀಶ್ ಕೆ. ಸುವರ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಧೂಮಪಾನ

By Billavavani
ಯುವವಾಹಿನಿ ಮಂಗಳೂರು ಘಟಕದಲ್ಲಿ ಧೂಮಪಾನ ನಿಷೇಧ ಹಾಗೂ ತಂಬಾಕು ನಿಯಂತ್ರಣ ಕಾನೂನು ಕುರಿತು ಜಾಗೃತಿ ಕಾರ್ಯಕ್ರಮ

ಮಂಗಳೂರು, ಜುಲೈ 14: ಯುವವಾಹಿನಿ (ರಿ.) ಮಂಗಳೂರು ಘಟಕದ ಸಾಪ್ತಾಹಿಕ ಸಭೆಯು ಘಟಕದ ಅಧ್ಯಕ್ಷರಾದ ಶ್ರೀ ಹರೀಶ್ ಕೆ. ಸುವರ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಧೂಮಪಾನ ನಿಷೇಧ, ತಂಬಾಕಿನ ದುಷ್ಪರಿಣಾಮಗಳು ಹಾಗೂ ತಂಬಾಕು ನಿಯಂತ್ರಣ ಕಾಯ್ದೆ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಶ್ರೀ ಪುಂಡಲೀಕ ಲಕಾಟಿ ಅವರನ್ನು ಅಧ್ಯಕ್ಷರು ಆತ್ಮೀಯವಾಗಿ ಸ್ವಾಗತಿಸಿದರು.

1001097156.jpg

ಜಾಗೃತಿ ಉಪನ್ಯಾಸದಲ್ಲಿ ಮಾತನಾಡಿದ ಶ್ರೀ ಪುಂಡಲೀಕ ಲಕಾಟಿ, ತಂಬಾಕು ಮತ್ತು ಧೂಮಪಾನದಲ್ಲಿ ಸುಮಾರು 4,000ಕ್ಕೂ ಹೆಚ್ಚು ವಿಷಕಾರಿ ರಾಸಾಯನಿಕಗಳು ಅಡಕವಾಗಿದ್ದು, ನಿಕೋಟಿನ್, ಟಾರ್, ಅಮೋನಿಯಾ ಸೇರಿದಂತೆ ಹಲವು ಹಾನಿಕಾರಕ ಅಂಶಗಳು ಮಾನವನ ದೇಹದ ಪ್ರತಿಯೊಂದು ಅಂಗಕ್ಕೂ ಗಂಭೀರ ಹಾನಿ ಉಂಟುಮಾಡುತ್ತವೆ ಎಂದು ತಿಳಿಸಿದರು. ಧೂಮಪಾನದ ದುಷ್ಪರಿಣಾಮಗಳು ಕೇವಲ ಸೇವಿಸುವ ವ್ಯಕ್ತಿಗಷ್ಟೇ ಸೀಮಿತವಾಗದೇ ಕುಟುಂಬದ ಸದಸ್ಯರು ಹಾಗೂ ಮಕ್ಕಳ ಮೇಲೂ ಪರಿಣಾಮ ಬೀರುತ್ತವೆ ಎಂದು ಅವರು ಎಚ್ಚರಿಸಿದರು.

ಸೆಕೆಂಡ್ ಹ್ಯಾಂಡ್ ಸ್ಮೋಕ್ ಹಾಗೂ ತರ್ಡ್ ಹ್ಯಾಂಡ್ ಸ್ಮೋಕ್ ಕುರಿತು ವಿವರಿಸಿದ ಅವರು, ಮನೆಯೊಳಗಿನ ಧೂಮಪಾನದಿಂದ ಕುಟುಂಬದ ಸದಸ್ಯರು ಹಾಗೂ ಗರ್ಭಿಣಿಯರು ಮತ್ತು ಗರ್ಭದಲ್ಲಿರುವ ಶಿಶುವಿಗೂ ಅಪಾಯ ಉಂಟಾಗಬಹುದು ಎಂದು ಹೇಳಿದರು. ದೇಹದ ಆರೋಗ್ಯಕ್ಕೆ ಹಾನಿಕಾರಕವಾದ ತಂಬಾಕು ಸೇವನೆಯ ಬದಲು ಪೌಷ್ಟಿಕ ಆಹಾರ ಹಾಗೂ ವಿಟಮಿನ್‌ಯುಕ್ತ ಆಹಾರವನ್ನು ಸೇವಿಸುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ತಂಬಾಕು ನಿಯಂತ್ರಣ ಕಾಯ್ದೆ–2003 ಹಾಗೂ ಕರ್ನಾಟಕದಲ್ಲಿ ಜಾರಿಯಲ್ಲಿರುವ ತಿದ್ದುಪಡಿ ನಿಯಮಗಳ ಕುರಿತು ಮಾಹಿತಿ ನೀಡಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಶಾಲಾ-ಕಾಲೇಜುಗಳ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ, ತಂಬಾಕು ಉತ್ಪನ್ನಗಳ ಜಾಹೀರಾತು, ಲೂಸ್ ಸಿಗರೇಟ್ ಮಾರಾಟ ಸೇರಿದಂತೆ ವಿವಿಧ ನಿಯಮಗಳ ಉಲ್ಲಂಘನೆಗೆ ದಂಡ ವಿಧಿಸುವ ಕಾನೂನುಗಳ ಬಗ್ಗೆ ವಿವರಿಸಿದರು.

ಅಲ್ಲದೆ, ಧೂಮಪಾನ ಅಥವಾ ತಂಬಾಕು ಸೇವನೆಯ ಚಟದಿಂದ ಮುಕ್ತರಾಗಲು ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ರೂಂ ನಂ.16ರಲ್ಲಿ ಉಚಿತ ಚಿಕಿತ್ಸೆ ಹಾಗೂ ಕೌನ್ಸೆಲಿಂಗ್ ಸೌಲಭ್ಯ ಲಭ್ಯವಿದ್ದು, ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆಯುವಂತೆ ಮನವಿ ಮಾಡಿದರು. ದಕ್ಷಿಣ ಕನ್ನಡ ಜಿಲ್ಲೆಯನ್ನು ತಂಬಾಕು ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಂತ್ಯದಲ್ಲಿ ಉಪಯುಕ್ತ ಮಾಹಿತಿ ನೀಡಿದ ಶ್ರೀ ಪುಂಡಲೀಕ ಲಕಾಟಿ ಅವರನ್ನು ಯುವವಾಹಿನಿ ಮಂಗಳೂರು ಘಟಕದ ವತಿಯಿಂದ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷ ಶ್ರೀ ಹರೀಶ್ ಕೆ. ಸುವರ್ಣ, ಕಾರ್ಯದರ್ಶಿ ಉಷಾ ಕೆ., ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಮಹಿಳಾ ಸಂಘಟನಾ ನಿರ್ದೇಶಕಿ ಶ್ರೀಮತಿ ಜಯಂತಿ ಕೋಟ್ಯಾನ್ ವಂದಿಸಿದರು.